ಪ್ರಮುಖ ಸುದ್ದಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ : ಪ್ರಚಾರ ವಾಹನಕ್ಕೆ ಚಾಲನೆ

ರಾಜ್ಯ(ಮಡಿಕೇರಿ) ಜು.13 :- ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಎಲ್‍ಇಡಿ ವಾಹನದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಪ್ರಚಾರ ಆಂದೋಲನಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿ.ಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರು ಚಾಲನೆ ನೀಡಿದರು.
ಜಿಲ್ಲೆಯ ಮೂರು ಗ್ರಾಮಗಳನ್ನು ಮಣ್ಣು ಆರೋಗ್ಯ ಅಭಿಯಾನದಡಿ ಈ ವರ್ಷ ಆಯ್ಕೆ ಮಾಡಲಾಗಿದೆ. ಮಣ್ಣು ಪರೀಕ್ಷೆ ಮೂಲಕ ಗ್ರಾಮದ ಭೂಮಿ ಫಲವತ್ತತೆ ಬಗ್ಗೆ ಸಮೀಕ್ಷೆ ಮಾಡಲಾಗುತ್ತದೆ. ತಾಲೂಕಿಗೆ ಒಂದರಂತೆ ಗ್ರಾಮ ಆಯ್ಕೆ ಮಾಡಲಾಗಿದೆ. ಹಾಕತ್ತೂರು(ಮಡಿಕೇರಿ), ನಂಜರಾಯಪಟ್ಟಣ(ಸೋಮವಾರಪೇಟೆ), ಕದನೂರು(ವಿರಾಜಪೇಟೆ) ಗ್ರಾಮ ಆಯ್ಕೆ ಮಾಡಿಕೊಳ್ಳಲಾಗಿದೆ.
ಕಳೆದ 4 ವರ್ಷದಿಂದ ಜಿಲ್ಲೆಯಲ್ಲಿ ಮಣ್ಣು ಪರೀಕ್ಷೆ ಮಾಡಿ ರೈತರಿಗೆ ವೈಯಕ್ತಿಕವಾಗಿ ಮಣ್ಣು ಆರೋಗ್ಯ ಚೀಟಿ ನೀಡಲಾಗಿದೆ. ಪ್ರಥಮ ಸುತ್ತಿನಲ್ಲಿ 45 ಸಾವಿರ ರೈತರಿಗೆ ಚೀಟಿ ನೀಡಲಾಗಿತ್ತು. 2 ನೇ ಸುತ್ತಿನಲ್ಲಿ 42 ಸಾವಿರ ರೈತರ ಜಮೀನಿನ ಮಣ್ಣು ಪರೀಕ್ಷೆ ಮಾಡಿ ಚೀಟಿ ನೀಡಲಾಗಿತ್ತು, ಇದೀಗ 3 ಗ್ರಾಮ ಆಯ್ಕೆ ಮಾಡಿಕೊಂಡು ಸಮಗ್ರ ಸಮೀಕ್ಷೆ ನಡೆಸಲಾಗುತ್ತಿದೆ. ಕೃಷಿ ಇಲಾಖೆ ಸಿಬ್ಬಂದಿ ರೈತರ ಜಮೀನಿಗೆ ತೆರಳಿ, ಮಣ್ಣು ಮಾದರಿ ಸಂಗ್ರಹಿಸುತ್ತಾರೆ. ಕೂಡಿಗೆಯಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರದಲ್ಲಿ 12 ಪೋಷಕಾಂಶ ಪರೀಕ್ಷೆ ಮಾಡಲಾಗುತ್ತದೆ. ಮಣ್ಣು ಆರೋಗ್ಯ ಚೀಟಿಯಲ್ಲಿ ಮಣ್ಣಿನ ಫಲವತ್ತತೆ ಮಾಹಿತಿಯೊಂದಿಗೆ ಗೊಬ್ಬರ ಬಳಕೆ, ಯಾವ ಬೆಳೆ ಬೆಳೆಯುವುದು ಸೂಕ್ತ ಎಂದು ಶಿಫಾರಸ್ಸು ಮಾಡಲಾಗುತ್ತದೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಾಜು ಅವರು ತಿಳಿಸಿದ್ದಾರೆ.
ಜಿಲ್ಲೆಯ ಜನದಟ್ಟನೆ ಪ್ರದೇಶದಲ್ಲಿ ಪ್ರಚಾರ ವಾಹನದ ಮೂಲಕ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಮೂರು ದಿನಗಳ ಕಾಲ ಮಾಹಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಾಜು, ಕಾರ್ಯಕ್ರಮ ಸಂಯೋಜಕರಾದ ಬೊಳ್ಳಜಿರ ಅಯ್ಯಪ್ಪ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: