ಪ್ರಮುಖ ಸುದ್ದಿ

ಸಂತಾನ ಹರಣ ಶಸ್ತ್ರ ಚಿಕಿತ್ಸೆಯಲ್ಲಿ ಪುರಷರ ಸಹಭಾಗಿತ್ವ ಮುಖ್ಯ : ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಡಾ. ಎನ್.ಆನಂದ್ ಅಭಿಮತ

ರಾಜ್ಯ(ಮಡಿಕೇರಿ) ಜು.13 : – ಸಂತಾನ ಹರಣ ಶಸ್ತ್ರ ಚಿಕಿತ್ಸೆಯಲ್ಲಿ ಪುರಷರ ಸಹಭಾಗಿತ್ವ ಬಹಳ ಮುಖ್ಯ ಎಂದು ಮಡಿಕೇರಿಯ ಶ್ರೀ ರಾಜರಾಜೇಶ್ವರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರ್.ಆರ್. ಆಸ್ಪತ್ರೆಯ ಆವರಣದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಡಾ.ಎನ್.ಆನಂದ್ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಮಾಜವು ಪುರುಷ ಪ್ರಧಾನ ಸಮಾಜವಾಗಿದ್ದು ಕೌಟುಂಬಿಕ ಜವಾಬ್ದಾರಿ ಮಕ್ಕಳ ಪಾಲನೆ, ಪೋಷಣೆ ಹಾಗೂ ಕುಟುಂಬ ಕಲ್ಯಾಣ ಯೋಜನೆಯು ಕೂಡ ಮಹಿಳೆಯೇ ಒಳಗಾಗಬೇಕು ಎಂಬ ಭಾವನೆ ನಮ್ಮಲ್ಲಿದೆ. ದುರಾದೃಷ್ಟವಶಾತ್ ನಮ್ಮ ಸಮಾಜದ ಮಹಿಳೆಯರು ಕೂಡ ಇದೇ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯೂ ಆಗಿರುವ ಡಾ. ಆನಂದ್ ವಿಷಾದಿಸಿದರು.
ಜನಸಂಖ್ಯಾಸ್ಫೋಟವು ಸಮಾಜದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ. 1952 ರಿಂದಲೂ ಕುಟುಂಬ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೂಡ 2028ರ ಹೊತ್ತಿಗೆ ಇದೇ ರೀತಿ ನಾವು ಮುಂದುವರಿದಲ್ಲಿ ಜನಸಂಖ್ಯಾ ವಿಷಯದಲ್ಲಿ ವಿಶ್ವಕ್ಕೆ ಮೊದಲಿಗರಾಗುತ್ತೇವೆ ಎಂದು ಡಾ. ಆನಂದ್ ಎಚ್ಚರಿಸಿದರು.
ಈ ವರ್ಷದ ಘೋಷಣೆ ವಾಕ್ಯವಾಗಿರುವ ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ ಕುರಿತು ಸಾಕಷ್ಟು ಮಾಹಿತಿಯನ್ನು ನೀಡಿದ ಅವರು ಬಡತನ ಮತ್ತು ಅನಕ್ಷರತೆ ಹಾಗೂ ಸಾಂಸಾರಿಕ ಒತ್ತಡಗಳ ಹಿನ್ನಲೆಯಲ್ಲಿ ಸಣ್ಣ ವಯಸ್ಸಿಗೆ ಮದುವೆ ಮಕ್ಕಳು ಹಾಗೂ ಪೂರಕ ಆರೋಗ್ಯ ಸಮಸ್ಯೆಗಳು ಉಂಟಾದ ಹಿನ್ನಲೆಯಲ್ಲಿ ಇನ್ನೂ ಕೂಡ ತಾಯಿ ಮತ್ತು ಮಗುವಿನ ಸಾವು ಸಂಭವಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕುಟುಂಬ ಕಲ್ಯಾಣ ಯೋಜನೆಯಲ್ಲಿ ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಅತ್ಯಂತ ಸುಲಭ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಇರುವ ಹಿನ್ನಲೆಯಲ್ಲಿ ಜನಸಂಖ್ಯಾ ನಿಯಂತ್ರಣ ಹಾಗೂ ಕುಟುಂಬ ಕಲ್ಯಾಣದ ಉದ್ದೇಶ ಮತ್ತು ಗುರಿಗಳನ್ನು ಸಾಧಿಸುವಲ್ಲಿ ಪುರುಷರ ಸಹಭಾಗಿತ್ವ ಬಹಳ ಮುಖ್ಯ ಎಂದು ಅವರು ಅಭಿಪ್ರಾಯಿಸಿದರು. ಸಾಂಸಾರಿಕ ನಿರ್ವಹಣೆಯಲ್ಲಿ ಯೋಜನಾಬದ್ಧವಾಗಿ ಕುಟುಂಬ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಂಡು ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಪೂರ್ವ ತಯಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾದ್ಯಾಪಕರು ಮತ್ತು ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರೂ ಆದ ಡಾ. ಮಂಜುನಾಥ್ ಮಾತನಾಡಿ ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿಯನ್ನು ಪ್ರತೀ ಮನೆಯಿಂದ ಆರಂಭಿಸಬೇಕು. ವೈದ್ಯಕೀಯ ಸೇವೆಯಲ್ಲಿರುವ ಪ್ರತಿಯೊಬ್ಬರೂ ಈ ವಿಷಯದ ಬಗ್ಗೆ ತಮಗೆ ಸಾಧ್ಯವಾದಷ್ಟು ಮಟ್ಟಿಗೆ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಬೇಕೆಂದು ಅವರು ಕರೆ ನೀಡಿದರು.
ಕುಟುಂಬ ಕಲ್ಯಾಣ ಮತ್ತು ಮಕ್ಕಳ ನಡುವಿನ ಅಂತರ ಕಾಪಾಡುವ ತಾತ್ಕಾಲಿಕ ಮತ್ತು ಶಾಶ್ವತ ವಿಧಿವಿಧಾನಗಳ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದ ಅವರು ಇಂದೂ ಕೂಡ ಈ ವ್ಯವಸ್ಥೆಯ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿದ್ದು ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಶಿಕ್ಷಣಾರ್ಥಿಗಳು ಅರಿವು ಮೂಡಿಸಬೇಕೆಂದು ಕರೆ ನೀಡಿದರು. ದೇಶದಲ್ಲಿ ಉತ್ತರ ಪ್ರದೇಶ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಸಿಕ್ಕಿಂ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ ಎಂದು ಮಾಹಿತಿ ನೀಡಿದ ಅವರು ಕರ್ನಾಟಕದಲ್ಲಿ ಕೊಡಗು ಕಡಿಮೆ ಜನಸಂಖ್ಯೆಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಜಾಸತ್ಯ ದಿನಪತ್ರಿಕೆಯ ಹಿರಿಯ ವರದಿಗಾರ ಬಿ.ಸಿ. ದಿನೇಶ್, ಅತಿಥಿಗಳಾಗಿ ಗ್ರೀನ್ ಡಾಟ್ ಟ್ರಸ್ಟ್ ನ ಜಿಲ್ಲಾ ವ್ಯವಸ್ಥಾಪಕರಾದ ಸಿ.ಇ. ವಿಶ್ವನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ತನು ಮತ್ತು ಸಂಘಡಿಗರು ಪ್ರಾರ್ಥಿಸಿದರೆ, ಮರಿಯಮ್ಮ ಅವರು ಸ್ವಾಗತಿಸಿದರು. ಪ್ರೀತಿಯವರು ಕಾರ್ಯಕ್ರಮ ನಿರೂಪಿಸಿ, ಕಾವ್ಯ ಅವರು ಸರ್ವರನ್ನು ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: