ಮೈಸೂರು

ಅರಸನ ಕೆರೆ ಗ್ರಾಮದ ಜಮೀನಿನಲ್ಲಿ 12 ಅಡಿ ಆಳದಲ್ಲಿ ಕಾಣಿಸಿಕೊಂಡಿವೆ ಎರಡು ಬೃಹತ್ ನಂದಿ ವಿಗ್ರಹಗಳು !

ಮೈಸೂರು,ಜು.15:- ಸಾಂಸ್ಕೃತಿಕ ನಗರಿ ಮೈಸೂರು ಹಲವಾರು ಪೌರಾಣಿಕ ಹಿನ್ನಲೆಯುಳ್ಳ ಸ್ಥಳವಾಗಿದೆ. ಇಲ್ಲಿ ರಾಜ ಮಹಾರಾಜರು ಕಟ್ಟಿಸಿದ ಆಳೆತ್ತರದ ಕೋಟೆ ಕೊತ್ತಲಗಳಿವೆ , ಗುಡಿ ಮಂದಿರಗಳಿವೆ. ಇನ್ನೂ ಕೆಲವು ಸ್ಥಳಗಳು ಯಾವ ಗುರುತೂ ಸಿಗದೆ ಮಣ್ಣಲ್ಲಿ ಮಣ್ಣಾಗಿ ಹೋಗಿವೆ.

ಅಂತಹದ್ದೇ ಒಂದು ಸ್ಥಳ ಮೈಸೂರು ಜಿಲ್ಲೆಯ ಅರಸನ ಕೆರೆ ಗ್ರಾಮದಲ್ಲಿದೆ. ಇಲ್ಲಿಯ ಒಂದು ಜಮೀನಿನಲ್ಲಿ ಸುಮಾರು 12 ಅಡಿ ಆಳದಲ್ಲಿ ಎರಡು ಬೃಹತ್ ಆದ ನಂದಿ ವಿಗ್ರಹಗಳು ಕಾಣಿಸಿಕೊಂಡಿವೆ. ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಅತ್ಯಂತ ದೊಡ್ಡದಾದ ನಂದಿಗಳು ಕಾಣಿಸಿರುವುದು ಅರಸನ ಕೆರೆ ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ. ಸುಮಾರು ನಲವತ್ತೈದು ವರ್ಷಗಳ ಹಿಂದಿಯೇ ಈ ವಿಗ್ರಹಗಳ ಕುರುಹು ಸಿಕ್ಕಿದ್ದು ಗ್ರಾಮಸ್ಥರೆಲ್ಲರು ಸೇರಿ ಭೂಮಿಯಲ್ಲಿ ಅಡಗಿದ್ದ ನಂದಿ ವಿಗ್ರಹಗಳನ್ನು ಹೊರ ತೆಗೆಯುವ ಪ್ರಯತ್ನ ಮಾಡಿದ್ದಾರೆ ಆದರೂ ಪ್ರಯೋಜನವಾಗಿಲ್ಲ. ದೊಡ್ಡದಾದ ಹಳ್ಳದಲ್ಲಿ ಅರ್ಧಂಬರ್ಧ ಸಿಕ್ಕಿರುವ ಈ ನಂದಿ ವಿಗ್ರಹಳಿಗೆ ನಲವತ್ತು ವರ್ಷದಿಂದ ಇಲ್ಲಿನ ಗ್ರಾಮಸ್ಥರು ಪೂಜೆ ಮಾಡುತ್ತ ಬಂದಿದ್ದಾರೆ. ಅಷ್ಟು ವರ್ಷಗಳೇ ಕಳೆದರೂ ಅದರ ಇತಿಹಾಸ ಏನೆಂಬುದು ತಿಳಿದಿಲ್ಲ ಎನ್ನುವುದೇ ಸೋಜಿಗದ ಸಂಗತಿ. ಮಾಹಿತಿಯ ಕೊರತೆಯಿಂದಾಗಿ ಪುರತತ್ವ ಇಲಾಖೆಯು ಇದರ ಬಗ್ಗೆ ಗಮನಹರಿಸಿಲ್ಲ‌ ಎನ್ನುವುದು ಕೂಡ ದುರಂತ. ಈ ಒಂದು ಬಸವನ ವಿಗ್ರಹಗಳು ಪತ್ತೆಯಾಗಿರುವುದು ಮೈಸೂರು ಜಿಲ್ಲೆಯ ಅರಸನ ಕೆರೆ ಗ್ರಾಮದಲ್ಲಿ. ಈ ವಿಗ್ರಹಗಳು ದೊಡ್ಡ ಹಳ್ಳದಲ್ಲಿ ಪತ್ತೆಯಾಗಿದ್ದು  ಇದರ ಜೊತೆಗೆ ಸುಮಾರು ಹತ್ತರಿಂದ ಹದಿನೈದು ಬೇರೆ ಬೇರೆ ವಿಗ್ರಹಗಳು ಪತ್ತೆಯಾಗಿವೆ, ನಲವತ್ತು ವರ್ಷಗಳಿಂದ ಆಳವಾದ ಕಂದಕದಲ್ಲಿ ಕಾಣಿಸಿರುವ ವಿಗ್ರಹಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತ ಬಂದಿದ್ದಾರೆ, ಮಳೆ ಬಂದಾಗ ನಂದಿ ವಿಗ್ರಹಗಳು ಸಂಪೂರ್ಣ ಮಣ್ಣಿನಲ್ಲಿ ಮುಚ್ಚಿ ಹೋಗುತ್ತವೆ.  ಈ ಜಾಗಕ್ಕೆ ಮಹಾರಾಜ ಚಾಮರಾಜ ಒಡೆಯರ್ ಭೇಟಿ ನೀಡಿದ್ದರಂತೆ.

ಈ ಒಂದು ಜಾಗಕ್ಕೆ ಚಾಮರಾಜ ಒಡೆಯರ್ ಅವರು ಭೇಟಿ ನೀಡಿದ್ದರು ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು, ಚಾಮರಾಜ ಒಡೆಯರ್ ಅವರು ಈ ಅರಸಿನ ಕೆರೆಗೆ ಬಂದು ಸ್ಥಳವನ್ನು ಪರಿಶೀಲಿಸಿ, ನಂದಿ ವಿಗ್ರಹ ವನ್ನು ಹೊರ ತೆಗೆಯುವ ಪ್ರಯತ್ನ ನಡೆಸಿದ್ದರಂತೆ.  ಬೃಹತ್ ಹಳ್ಳದಲ್ಲಿ ಹೂತು ಹೋಗಿದ್ದ ನಂದಿ ವಿಗ್ರಹವನ್ನು ತೆಗೆಯಲು , ಹಳ್ಳದಲ್ಲಿ ಇದ್ದ ನೀರನ್ನು ತೋಡಲು ಡೀಸೆಲ್ ಎಂಜಿನ್ ಗಳನ್ನು ತಂದಿದ್ದರಂತೆ. ಎಷ್ಟೇ ಸಲ ಪ್ರಯತ್ನಿಸಿದರೂ ಕಾರ್ಯ ವಿಫಲವಾಯಿತಂತೆ.  ಕೊನೆಗೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮಹರಾಜರು ಹಳದಲ್ಲಿದ್ದ ನೀರಿಗೆ ಪೂಜೆ ಸಲ್ಲಿಸಿ ಹೋಗಿದ್ದರು ಎನ್ನುತ್ತಾರೆ ಇಲ್ಲಿನ ಹಿರಿಯರು.

ಆವತ್ತಿನ ಕಾಲಕ್ಕೆ ಈ ಸ್ಥಳದ ಮಹಿಮೆ ಬಗ್ಗೆ ಮತ್ತು ಅಲ್ಲಿನ  ಎರಡು ಬೃಹತ್ ನಂದಿ ವಿಗ್ರಹದ ಬಗ್ಗೆ ಸುಳಿವು ನೀಡಿದ್ದರಂತೆ ಹಿರಿಯ ಜ್ಞಾನಿಗಳು. ಈ ಜಾಗದಲ್ಲಿ ಎರಡು ನಂದಿ ವಿಗ್ರಹಗಳು ಮತ್ತು ಕಂಚಿನ ರಥವಿದೆ ಎಂಬ ಮಾಹಿತಿ ನೀಡಿದ್ದರಂತೆ.

ಈ ಜಾಗಕ್ಕೆ ಐತಿಹಾಸಿಕ ಹಿನ್ನೆಲೆ ಇರಬಹುದಾ? ಈ ಒಂದು ಜಾಗ ಇತಿಹಾಸದ ಪುಟದಲ್ಲಿ ಸಿಗಬಹುದಾ ? ಈ ಜಾಗದ ಬಗ್ಗೆ ಸಂಶೋಧನೆಗಳು ನಡೆಯ ಬೇಕು. ಇಲ್ಲಿ ಮೂಡಿರುವ ಕುತೂಹಲಕ್ಕೆ ಉತ್ತರ ಸಿಗಬೇಕು ಎನ್ನುವುದು ಅರಸನ ಕೆರೆ ಗ್ರಾಮಸ್ಥರ ಅಳಲು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: