
ಪ್ರಮುಖ ಸುದ್ದಿ
ಇಂದಿನಿಂದ ರಾಮಾಯಣ ಚಾತುರ್ಮಾಸ್ಯ: ರಾಘವೇಶ್ವರ ಶ್ರೀಗಳ ಪುರಪ್ರವೇಶ
ರಾಜ್ಯ(ಬೆಂಗಳೂರು)ಜು.15:- ಶ್ರೀ ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ವ್ರತ ಮಂಗಳವಾರ (ಜುಲೈ 16) ಆರಂಭವಾಗುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಪುರಪ್ರವೇಶ ಅದ್ಧೂರಿಯಾಗಿ ನೆರವೇರಿತು.
ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಭಟ್ ಬೇರ್ಕಡವು, ಚಾತುರ್ಮಾಸ್ಯ ಕ್ರಿಯಾಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಕೋರಮಂಗಲ, ಕಾರ್ಯದರ್ಶಿ ವಾದಿರಾಜ ಸಾಮಗ, ರಾಮಾಯಣ ಕ್ರಿಯಾಸಮಿತಿ ಅಧ್ಯಕ್ಷ ಶಾರದಾ ಜಯಗೋವಿಂದ್, ಕೆಕ್ಕಾರ್ ರಾಮಚಂದ್ರ ಭಟ್ ಹಾಗೂ ಶ್ರೀಮಠದ ಅಪಾರ ಶಿಷ್ಯ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದು ಪುರಪ್ರವೇಶ ಮಾಡಿದ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು.
ಮಂಗಳವಾರ ಚಾತುರ್ಮಾಸ್ಯ ವ್ರತಾರಂಭದ ಅಂಗವಾಗಿ ಬೆಳಿಗ್ಗೆ ಶ್ರೀಕರಾರ್ಚಿತ ಪೂಜೆಯ ಬಳಿಕ ಶ್ರೀವ್ಯಾಸಪೂಜೆ ಮತ್ತು ಗುರು ಪರಂಪರೆಯ ವಿಶೇಷ ಪೂಜೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಅನ್ನರಾಶಿ ಪೂಜೆ, ಪುನರ್ವಸು ಲೋಕಾರ್ಪಣೆ, ಮಧ್ಯಾಹ್ನ 2ಕ್ಕೆ ಚಾತುರ್ಮಾಸ್ಯ ಸಭೆ ಮತ್ತು ನೂತನ ಶಾಸನತಂತ್ರದ ಘೋಷಣೆ ನಡೆಯಲಿದೆ. (ಎಸ್.ಎಚ್)