ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್‍ನಿಂದಲೂ ಬಿಎಸ್‍ವೈ– ಅನಂತ್‍ ಸಂಭಾಷಣೆ ಸಿ.ಡಿ ಬಿಡುಗಡೆ: ಯಡಿಯೂರಪ್ಪಗೆ ತಿರುಗೇಟು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‍ಗೆ ದುಡ್ಡು ಕೊಟ್ಟಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೇ ಕಾಂಗ್ರೆಸ್‍ ಸಿ.ಡಿ ಬಿಡುಗಡೆ ಮಾಡಿದೆ.

ಹೌದು. ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯ ಧ್ವನಿಸಂಗ್ರಹವನ್ನು ಕಾಂಗ್ರೆಸ್‍ ಬಿಡುಗಡೆ ಮಾಡಿದ್ದು, ಅದರಲ್ಲಿ ಹೈಕಮಾಂಡ್‍ಗೆ ಬಿಜೆಪಿಯವರೂ ದುಡ್ಡು ನೀಡಿದ್ದಾರೆ ಎಂಬರ್ಥದ ಮಾತುಗಳಿವೆ ಎನ್ನಲಾಗಿದೆ.

ಹೀಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಮಳೆಗರೆಯುತ್ತಿದ್ದ ಯಡಿಯೂರಪ್ಪ ಈಗ ಸ್ವತಃ ತಾವೇ ವಿವಾದದಲ್ಲಿ ಸಿಲುಕುವಂತಾಗಿದೆ.

ಸಿ.ಡಿ ಬಿಡುಗಡೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಇಬ್ಬರೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ರಾಜಕೀಯ ಪ್ರೇರಿತ:

ಸಿ.ಡಿ ಬಿಡುಗಡೆ ಮಾಡಿದ ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ, ಯಡಿಯೂರಪ್ಪ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ ಎಂಬುದು ಈ ಸಂಭಾಷಣೆಯಿಂದ ಸಾಬೀತಾಗಿದೆ. ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಕೂಡ ಈ ಸಂಭಾಷಣೆಯಲ್ಲಿ ಮಾತನಾಡಿದ್ದು, ಅವರ ವಿರುದ್ಧವೂ ಬಿಜೆಪಿ ಕ್ರಮ ಕೈಗೊಳ್ಳಬೇಕು. ಕೇಂದ್ರ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ತೀವ್ರ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಜೈಲಿಗೆ ಹೋದ ಮೊದಲ ಸಿಎಂ:

ವಿಷಯದ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವ ಬಸವರಾಜ ರಾಯರೆಡ್ಡಿ ಅವರು, ಯಡಿಯೂರಪ್ಪ ಸ್ವತಃ ತಾವೇ ಭ್ರಷ್ಟಾರ ನಡೆಸಿ ಜೈಲಿಗೆ ಹೋದ ಕರ್ನಾಟಕದ ಮೊದಲ ಸಿಎಂ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದು ತಮಗೆ ಆಶ್ಚರ್ಯ ತರಿಸಿದೆ ಎಂದಿದ್ದಾರೆ.

ಸೂಕ್ತ ದಾಖಲೆ ಕೊಡಿ:

ಸಿಎಂ ಹೈಕಮಾಂಡ್‍ಗೆ ಒಂದು ರುಪಾಯಿ ಕೊಟ್ಟಿದ್ದರೂ ತಪ್ಪಿತಸ್ಥರೇ. ಆದರೆ ಯಡಿಯೂರಪ್ಪ ತಮ್ಮ ಆರೋಪಕ್ಕೆ ಸೂಕ್ತ ದಾಖಲೆ ಒದಗಿಸಬೇಕು. ಆಧಾರ ರಹಿತ ಆರೋಪವನ್ನು ಒಪ್ಪಲು ಸಾಧ್ಯವಿಲ್ಲ… – ಇದು ಪ್ರಕರಣದ ಕುರಿತು ಸಚಿವ ರಮೇಶ್ ಕುಮಾರ್ ಅವರ ಮಾತುಗಳು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸೂಕ್ತ ದಾಖಲೆ ಇಲ್ಲದೆ ಮಾತನಾಡುವುದನ್ನು ಯಡಿಯೂರಪ್ಪ ನಿಲ್ಲಿಸಬೇಕು ಎಂದರು.

ಮಾನನಷ್ಟ ಮೊಕದ್ದಮೆ:

“ತಮ್ಮ ಹೆಸರು ಹೇಳುತ್ತಿರುವ ಯಡಿಯೂರಪ್ಪ ಸೂಕ್ತ ದಾಖಲೆ ಒದಗಿಸಬೇಕು. ಅವರ ವಿರುದ್ಧ ಈಗಾಗಲೇ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಅದರ ನೋಟಿಸ್ ಅವರನ್ನು ಇಷ್ಟರಲ್ಲೇ ತಲುಪಲಿದೆ” ಎಂದು ವಿಧಾನಪರಿಷತ್ ಸದಸ್ಯ ಗೋವಿಂದರಾಜು ಕಿಡಿಕಾರಿದ್ದಾರೆ.

ಐಟಿ ಅಧಿಕಾರಿಗೂ ಪತ್ರ?

ಯಡಿಯೂರಪ್ಪ ಐಟಿ ಇಲಾಖೆಯಿಂದ ಹೇಗೆ ಮಾಹಿತಿ ಪಡೆದರು? ಅವರಿಗೆ ಮಾಹಿತಿ ನೀಡಿದವರು ಯಾರು ಎಂದು ಗೋವಿಂದರಾಜು ಪ್ರಶ್ನಿಸಿದ್ದಾರೆ. ಈ ಕುರಿತು ಐಟಿ ಅಧಿಕಾರಿಗಳಿಗೂ ಪತ್ರ ಬರೆದು “ಯಡಿಯೂರಪ್ಪನವರಿಗೆ ನೀವು ಮಾಹಿತಿ ನೀಡಿದ್ದೀರಾ? ಅವರಿಗೆ ಮಾಹಿತಿ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ” ಎಂದು ಪ್ರಶ್ನಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹಕ್ಕುಚ್ಯುತಿ ನೋಟಿಸ್!

ವಿಧಾನಪರಿಷತ್ ಸದಸ್ಯರಾಗಿರುವ ಗೋವಿಂದರಾಜು ಅವರು, ಯಡಿಯೂರಪ್ಪ ಆಧಾರ ರಹಿತ ಆರೋಪ ಮಾಡುವ ಮೂಲಕ ಸದನದ ಸದಸ್ಯನಾಗಿರುವ ನನ್ನ ಬಗ್ಗೆ ಹಗುರ ಆರೋಪ ಮಾಡಿ ಹಕ್ಕುಚ್ಯುತಿ ಮಾಡಿದ್ದಾರೆ. ಹೀಗಾಗಿ ಹಕ್ಕುಚ್ಯುತಿ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.

ಸಿ.ಡಿ.ಯಲ್ಲಿರುವುದು ಬಿಜೆಪಿ ವಿಷಯವಲ್ಲ:

ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು ಸಿ.ಡಿ ಯಲ್ಲಿ  ಮಾತನಾಡಿರುವುದು ಬಿಜೆಪಿಯ ಭ್ರಷ್ಟಾಚಾರದ ವಿಷಯವಲ್ಲ. ಅದು ಕಾಂಗ್ರೆಸ್‍ನವರ ಕುರಿತು ಆಡಿದ ಮಾತುಗಳು ಎಂದು ಬಿಜೆಪಿ ಮುಖಂಡ ಗೋ.ಮಧುಸೂದನ್ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಿ.ಡಿ ಯಲ್ಲಿರುವ ವಿಷಯವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಅಲ್ಲಿ ಸಂಭಾಷಣೆ ನಡೆದಿರುವುದು ಬಿಜೆಪಿ ವಿಷಯವಲ್ಲ, ಅದು ಕಾಂಗ್ರೆಸ್‍ಗೆ ಸಂಬಂಧಪಟ್ಟ ವಿಷಯ ಎಂದು ಸಮಜಾಯಿಷಿ ನೀಡಲು ಪ್ರಯತ್ನಪಟ್ಟರು.

Leave a Reply

comments

Related Articles

error: