ಪ್ರಮುಖ ಸುದ್ದಿ

ಬಹುಕೋಟಿ ಐಎಂಎ ವಂಚನೆ ಪ್ರಕರಣ : ಶಾಸಕ ರೋಷನ್ ಬೇಗ್ ವಿಚಾರಣೆ ನಡೆಸಿದ ಎಸ್ ಐ ಟಿ

ರಾಜ್ಯ(ಬೆಂಗಳೂರು)ಜು.16:-   ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಸ್‍ಐಟಿ ಅಧಿಕಾರಿಗಳು ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದು, ವಿಮಾನ ನಿಲ್ದಾಣದಲ್ಲೇ ಹಿರಿಯ ಅಧಿಕಾರಿಗಳಿಂದ ಅವರ ವಿಚಾರಣೆ ನಡೆದಿದೆ ಎನ್ನಲಾಗಿದೆ. ರೋಷನ್ ಬೇಗ್ ಮುಂಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಲಭಿಸಿದ ಕಾರಣ ಎಸ್‍ಐಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಧ್ಯರಾತ್ರಿ 3.30ರವರೆಗೂ ವಿಮಾನ ನಿಲ್ದಾಣದಲ್ಲಿಯೇ ಶಾಸಕರ ತೀವ್ರ ವಿಚಾರಣೆ ನಡೆಸಿದ್ದು, ಈ ವೇಳೆ ಅಧಿಕಾರಿಗಳು ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ರಿಂದ ಹಣ ಪಡೆದ ಕುರಿತಂತೆ ಹಾಗೂ ಆ ಹಣವನ್ನು ಏನು ಮಾಡಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಇಲ್ಲ ಎಂದು ಬೇಗ್ ಉತ್ತರಿಸಿದ್ದು, ಅಧಿಕಾರಿಗಳು ತಮ್ಮನ್ನು ವಶಕ್ಕೆ ಪಡೆದ ಕಾರ್ಯವನ್ನು ಟೀಕಿಸಿದ್ದಾರೆ ಎನ್ನಲಾಗಿದೆ.

ಇದೇ 19ರಂದು ನಾನೇ ವಿಚಾರಣೆಗೆ ಖುದ್ದು ಹಾಜರಾಗುತ್ತಿದ್ದೆ. ಈ ಬಗ್ಗೆ ಈ ಹಿಂದೆಯೂ ಕೂಡ ಹೇಳಿಕೆ ನೀಡಿದ್ದೆ. ಆದರೆ ಈ ರೀತಿ ನನ್ನನ್ನು ವಶಕ್ಕೆ ಪಡೆದಿರುವುದು ಸರಿಯಲ್ಲ ಎಂದು ಬೇಗ್ ಕಿಡಿಕಾರಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: