ಕರ್ನಾಟಕ

ಸಾಂಕ್ರಮಿಕ ರೋಗಗಳಿಗೆ ತಡೆ: ಲಾರ್ವಾ ಸಮೀಕ್ಷೆಗೆ ಚಾಲನೆ

ಹಾಸನ (ಜು.16): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿಂದು ನಗರಸಭೆ ಆಯುಕ್ತರಾದ ಪರಮೇಶ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರುಗಳು ಸಾಮೂಹಿಕ ಲಾರ್ವಾ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ 15 ಜುಲೈ 2019ರ ವರೆಗೆ 107 ಡೆಂಗ್ಯೂ ಜ್ವರ ಪ್ರಕರಣಗಳು ಮತ್ತು 33 ಚಿಕುನ್‍ಗುನ್ಯಾ ಪ್ರಕರಣಗಳು ವರದಿಯಾಗಿರುತ್ತವೆ. 107 ಡೆಂಗ್ಯೂ ಜ್ವರ ಪ್ರಕರಣಗಳ ಪೈಕಿ 23 ಡೆಂಗ್ಯೂ ಪ್ರಕರಣಗಳು ಹಾಸನ ನಗರ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಾಸನ ನಗರದಾದ್ಯಂತ ಸಾಮೂಹಿಕ ಲಾರ್ವಾ ಸಮೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಮನೆಗಳಿಗೆ ಆರೋಗ್ಯ ಸಿಬ್ಬಂದಿ, ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ. ಒಟ್ಟು 300 ಜನ ಆರೋಗ್ಯ ಇಲಾಖಾ ಸಿಬ್ಬಂದಿ ಮನೆ ಭೇಟಿ ನಡೆಸಲಿದ್ದು, ಈ ಕಾರ್ಯಕ್ರಮದಲ್ಲಿ 30 ಜನ ಆರೋಗ್ಯ ಇಲಾಖೆಯ ಮೇಲ್ವಿಚಾರಕರಾಗಿ ಪಾಲ್ಗೊಂಡಿದ್ದಾರೆ.

ಮನೆ ಭೇಟಿ ಸಂದರ್ಭದಲ್ಲಿ ಡೆಂಗ್ಯೂ ಹರಡುವ ಈಡೀಸ್ ಸೊಳ್ಳೆಗಳ ಲಾರ್ವಾ ಪತ್ತೆ ಮಾಡಿ ಅದರ ನಾಶ ಹಾಗೂ ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಕರಪತ್ರ ವಿತರಿಸುವ ಮೂಲಕ ಮತ್ತು ಪ್ರತಿ ಮನೆಗೆ ಒಂದರಂತೆ ಸ್ಟಿಕ್ಕರ್ ಅಂಟಿಸುತ್ತಾ ಆರೋಗ್ಯ ಶಿಕ್ಷಣ ನೀಡಲಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ನಗರದಾದ್ಯಂತ ಕಳೆದ 2 ದಿನದಿಂದ ಮೈಕಿಂಗ್ ಪ್ರಚಾರ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಈ ಸಂದರ್ಭದಲ್ಲಿ ನಗರಸಭಾ ಆಯುಕ್ತರು & ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡುತ್ತಾ ಪ್ರತಿಯೊಬ್ಬರು ಸೊಳ್ಳೆಗಳ ಲಾರ್ವಾ ನಾಶ ಮತ್ತು ಡೆಂಗ್ಯೂ ನಿಯಂತ್ರಣದಲ್ಲಿ ಸಹಕರಿಸುವಂತೆ ಅವರು ತಿಳಿಸಿರುತ್ತಾರೆ.

ಸಮಾರಂಭದಲ್ಲಿ ಡಿ,ವಿ.ಬಿ.ಡಿ.ಸಿ.ಒ ಡಾ. ರಾಜ್ ಗೋಪಾಲ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯ್, ಎಂಟಮಾಲಜಿಸ್ಟ್ ರಾಜೇಶ್ ಕುಲಕರ್ಣಿ ಮತ್ತು ಆರೋಗ್ಯ ಇಲಾಖೆಯ ವಿವಿಧ ಸಿಬ್ಬಂದಿ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: