
ಕರ್ನಾಟಕ
ಆರೋಗ್ಯವಾಗಿದ್ದೇನೆ, ವದಂತಿಗಳಿಗೆ ಕಿವಿಗೊಡಬೇಡಿ: ನಟ ದ್ವಾರಕೀಶ್
ಬೆಂಗಳೂರು,ಜು.16-ನಟ, ನಿರ್ದೇಶಕ ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ಹಾಗೂ ಅವರು ನಿಧನರಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, ಈ ಕುರಿತು ಸ್ವತಃ ದ್ವಾರಕೀಶ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ದ್ವಾರಕೀಶ್ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಅದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ನಮಸ್ಕಾರ. ನಿಮ್ಮ ದ್ವಾರಕೀಶ್, ಕನ್ನಡದ ಕುಳ್ಳ ಆರೋಗ್ಯವಾಗಿ ಇದ್ದೀನಿ, ಹುಷಾರಾಗಿ ಇದ್ದೀನಿ. ಯಾವ ತರಹದ ಸುಳ್ಳು ವದಂತಿಗಳಿಗೆ ನಿಗಾ ಕೊಡಬೇಡಿ. ಏನೇ ಆದರೂ ನಿಮಗೆ ಗೊತ್ತಾಗುತ್ತದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ನಿಮ್ಮ ದ್ವಾರಕೀಶ್ ಚೆನ್ನಾಗಿದ್ದಾನೆ, ಚೆನ್ನಾಗಿದ್ದೀನಿ, ಚೆನ್ನಾಗಿ ಇರ್ತೀನಿ. ಎಲ್ಲಾ ಆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಎಂದಿದ್ದಾರೆ.
ದ್ವಾರಕೀಶ್ ಅವರ ಬಗ್ಗೆ ವದಂತಿಗಳು ಹಬ್ಬಿದ ಹಿನ್ನೆಲೆಯಲ್ಲಿ ನಿರ್ದೇಶಕ ಕೆ.ಎಂ.ಚೈತನ್ಯ ಸಹ ಟ್ವಿಟ್ ಮಾಡಿ “ದ್ವಾರಕೀಶ್ ಸಾರ್ ಚೆನ್ನಾಗಿದ್ದಾರೆ. ದೇವರ ದಯೆ. ಅವರ ಆರೋಗ್ಯದ ಬಗ್ಗೆ ಯಾವುದೇ ವದಂತಿಗಳನ್ನು ನಂಬಬೇಡಿ” ಎಂದಿದ್ದಾರೆ.
ಈ ವದಂತಿಗಳಿಂದ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಈಗ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದ್ದು, ಅಭಿಮಾನಿಗಳು ನಿಟ್ಟಿಸಿರು ಬಿಟ್ಟಿದ್ದಾರೆ. (ಎಂ.ಎನ್)