ಮೈಸೂರು

‘ಗುರು’ ಎನಿಸಿಕೊಂಡವನು ಬದುಕನ್ನು ಕಲಿಸುತ್ತಾನೆ : ಪ್ರೊ.ಹೆಚ್.ಎಸ್.ಉಮೇಶ್

ಮೈಸೂರು, ಜು.16- ನಗರದ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ವತಿಯಿಂದ ಇಂದು ಗುರುಪೂರ್ಣಿಮೆ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಂಗಕರ್ಮಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಹೆಚ್.ಎಸ್.ಉಮೇಶ್‍ರವರ ನಿವಾಸದಲ್ಲಿ ಗುರುವಂದನಾ ಕಾರ್ಯಕ್ರಮದೊಂದಿಗೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ಪ್ರೊ.ಹೆಚ್.ಎಸ್.ಉಮೇಶ್ ಅವರು, ‘ಗುರು’ ಆದವನು ಬಹಳ ಮುಖ್ಯವಾಗಿ ಬದುಕನ್ನು ಕಲಿಸುತ್ತಾನೆ. ವಿದ್ಯಾರ್ಥಿಗಳಿಗೆ ಕಲಿಕೆಯ ಕ್ರಮದಲ್ಲಿ ಪಠ್ಯ ಪುಸ್ತಕಗಳ ಜೊತೆಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಡಿ ಶಿಕ್ಷಣದ ಜೊತೆಗೆ ಬದುಕಿನ ಪಾಠವನ್ನು ಕಲಿಸುತ್ತಾನೆ, ಅವನೇ ನಿಜವಾದ ಗುರು ಎಂದರು. ಗುರು ಆದವನು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡು ಅವನೇ ವಿದ್ಯಾರ್ಥಿಯಾದಾಗ ಮಾತ್ರ ಉತ್ತಮ ಗುರು ಎನಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಇಂದು ಸರ್ಕಾರದ ನೀತಿ, ನಿಯಮಗಳು ಗಣನೀಯ ಪ್ರಮಾಣದಲ್ಲಿ ಬದಲಾಗುತ್ತಿದ್ದು, ಬೋಧನಾ ಕ್ರಮದಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಕಲಿಕೆಗಿಂತ ಇನ್ನಿತರ ಚಟುವಟಿಕೆಗಳೇ ಹೆಚ್ಚಾಗಿದ್ದು, ತರಗತಿಗಷ್ಟೇ ಬೋಧನಾ ವಿಧಾನ ಸೀಮಿತವಾಗಿರುವುದು ವಿಷಾಧನೀಯ ಎಂದು ತಿಳಿಸಿದರು. ಶಿಕ್ಷಣದ ಮೌಲ್ಯ ಇಂದು ಉಳಿಯಬೇಕಾದರೆ ತಾತ್ವಿಕತೆಯ ಕಡೆಗೆ ಒಲವು ಮೂಡಬೇಕು. ಹಾಗಾದಾಗ ಮಾತ್ರ ಶಿಕ್ಷಣ ಉಳಿಯುತ್ತದೆ ಎಂದು ತಿಳಿಸಿದ ಅವರು, ರಂಗಕಲೆಗಳು ಕೂಡ ಇಂದು ನಶಿಸುತ್ತಿದೆ. ಏಕೆಂದರೆ ರಂಗಭೂಮಿಯಲ್ಲಿ ನಾಟಕ ವೀಕ್ಷಿಸುವವರ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದಕ್ಕೆ ಪಾಶ್ಚಾತ್ಯ ಸಂಗೀತ, ನೃತ್ಯ ಹಾಗೂ ಚಲನಚಿತ್ರಗಳ ಮಾಧ್ಯಮಗಳೇ ರಂಗಭೂಮಿಗೆ ಒಲವು ಕಡಿಮೆ ಆಗಲು ಮುಖ್ಯ ಕಾರಣವೆಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ ಹೋರಾಟಗಾರ ಎಂ.ರಾಮೇಗೌಡರವರು ಮಾತನಾಡುತ್ತಾ, ಇಂದು 2067ನೇ ಗುರುಪೂರ್ಣಿಮೆಯನ್ನು ನಾಡಿನಾದ್ಯಂತ ಆಚರಿಸುತ್ತಿರುವುದು ಅರ್ಥಪೂರ್ಣವಾದ ಸಂಗತಿ ಎಂದು ತಿಳಿಸಿ, ಪರಶಿವನು ವೇದವ್ಯಾಸರಿಗೆ ಕಾಶಿ ಕ್ಷೇತ್ರದಲ್ಲಿ ನೀನು ಸರ್ವರಿಗೂ ಗುರು ಎಂಬ ಬಿರುದನ್ನು ನೀಡಿದ್ದರಿಂದ ವೇದವ್ಯಾಸರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಆದ್ದರಿಂದ ವೇದವ್ಯಾಸರ ಜನ್ಮದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆಯ ಗೌರವ ಖಜಾಂಚಿಗಳಾದ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆಯವರು ಮಾತನಾಡಿ, ಇಂದು ಗುರುಪೂರ್ಣಿಮೆಯನ್ನು ಆಚರಿಸುತ್ತಿರುವುದು ಗುರು-ಶಿಷ್ಯರ ಸಮ್ಮಿಲನದ ಸಂಕೇತ. ಇಂತಹ ಗುರು-ಶಿಷ್ಯರ ಸಮ್ಮಿಲನಗಳು ಗುರುಪೂರ್ಣಿಮೆಗಷ್ಟೇ ಮೀಸಲಾಗಿರದೇ ನಿತ್ಯ ನಿರಂತರವಾಗಿ ನಡೆಯಲೆಂದು ಆಶಿಸಿದರು.
ವೇದಿಕೆಯಲ್ಲಿ ಯುವ ವಕೀಲರಾದ ಎಸ್,ಪಿ.ಮಂಜುನಾಥ್, ನೋಟರಿ ಹಾಗೂ ಬರಹಗಾರರಾದ ಕೆ.ವಿ.ವಾಸು, ಸಮಾಜ ಸೇವಕ ಜಿ.ಪಿ.ಹರೀಶ್, ಟ್ರಸ್ಟ್‍ನ ಗೌರವ ಕಾರ್ಯದರ್ಶಿ ಎಂ.ಎಸ್.ಬಾಲಸುಬ್ರಹ್ಮಣ್ಯಂ, ಶಿಕ್ಷಕರಾದ ರವಿಕುಮಾರ್ ಉಪಸ್ಥಿತರಿದ್ದರು. ಸಮಾರಂಭಕ್ಕೆ ಕೆ.ವಿ.ವಾಸು ಪ್ರಾರ್ಥಿಸಿದರೆ, ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಎಂ.ಎಸ್.ಬಾಲಸುಬ್ರಹ್ಮಣ್ಯಂ ವಂದಿಸಿದರು. ಸಮಾರಂಭದ ನಂತರ ಗಾಯಕ ಕೆ.ವಿ.ವಾಸುರವರಿಂದ ಗುರುವಿನ ಕುರಿತಾದ ಗಾನಸುಧೆ ಹರಿದುಬಂತು. (ಎಸ್.ಎಚ್)

Leave a Reply

comments

Related Articles

error: