ಮೈಸೂರು

ʼಕಷ್ಟ ನಷ್ಟಗಳ ಹಾದಿಯಲ್ಲಿದೆ ಗೆಲುವಿನ ರಹಸ್ಯʼ : ನಾಗಾರ್ಜುನ .ಬಿ .ಗೌಡ

ಮೈಸೂರು: ಜು.18:- ಕಡು ಕಷ್ಟ ಮತ್ತು ಸಮಸ್ಯೆಗಳ ಹಾದಿಯಲ್ಲಿ ಆತ್ಮವಿಶ್ವಾಸದಿಂದ ದೃಢವಾದ ಹೆಜ್ಜೆಗಳನ್ನು ಇಡುತ್ತಾ ಗೆಲುವಿನತ್ತ ಸಾಗಬಹುದು ಎಂದು 2019ರ ಐ.ಎ.ಎಸ್.‌ ಪ್ರೊಬೇಷನರಿ ಅಧಿಕಾರಿ ನಾಗಾರ್ಜುನ.ಬಿ.ಗೌಡ ಅಭಿಪ್ರಾಯಪಟ್ಟರು.

ನಗರದ ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆಯಲ್ಲಿ ನಡೆಯುತ್ತಿರುವ ಐ.ಎ.ಎಸ್.‌ ಮತ್ತು ಕೆ.ಎ.ಎಸ್‌ ಪರೀಕ್ಷೆಯ ಉಚಿತ ತರಬೇತಿ ಕಾರ್ಯಾಗಾರದಲ್ಲಿ ನಿನ್ನೆ  ಉಪನ್ಯಾಸ ನೀಡಿದರು.

ಸಮಸ್ಯೆಗ ಳಿಲ್ಲದ ಮನುಷ್ಯನಿಲ್ಲ. ಸಮಸ್ಯೆಗಳನ್ನೇ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡು ಗೆಲುವಿನ ಸಿಂಹಾಸನ ಏರಬೇಕು ಎಂದರು. ಗ್ರಾಮೀಣ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಲ್ಲಿ ಶಕ್ತಿ ಮತ್ತು ಸಾಮರ್ಥ್ಯವಿದ್ದರೂ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಹಿಂಜರಿಕೆಯ ಮನೋಭಾವನೆ ಮತ್ತು ಕೀಳರಿಮೆಯನ್ನು ಕಿತ್ತೊಗೆದು ಆತ್ಮ ವಿಶ್ವಾಸದಿಂದ ಐ.ಎ.ಎಸ್.‌, ಐ.ಪಿ.ಎಸ್.‌ ಕೆ.ಎ.ಎಸ್.‌ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ ಜಯಗಳಿಸಬಹುದು.

ಯಶಸ್ಸಿಗೆ ಕಠಿಣ ಪ್ರರಿಶ್ರಮ ಅಗತ್ಯ. ದೃಢ ಮನಸ್ಸು ಇಟ್ಟುಕೊಂಡು ಅಧ್ಯಯನ ಮಾಡಿದರೆ ಯಾರೂ ಬೇಕಾದರೂ ಐ.ಎ.ಎಸ್.‌ ಪರೀಕ್ಷೆ ಮಾಡಲು ಸಾಧ್ಯ. ನಾನು ಮೂಲತ: ಬಡ ಕುಟುಂಬದಿಂದ ಬಂದು ಸರ್ಕಾರಿ ಉಚಿತ ಸೀಟ್‌ ಪಡೆದು ವೈದ್ಯನಾದೆ. ನಂತರ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐ.ಎ.ಎಸ್.‌ ಪರೀಕ್ಷೆಯನ್ನು ತೆಗೆದುಕೊಂಡು ಯಶಸ್ವಿಯಾದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಬಿ.ಸಿ. ಶಿವಾನಂದಮೂರ್ತಿ ಮಾತನಾಡಿ,ನಾನೂ ಕೂಡ ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರದೇಶದ ಬಡ ಕುಟುಂಬದಿಂದ ಬಂದವನು. ಮದ್ದೂರು ತಾಲೂಕು ಆಫೀಸ್‌ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮಾಡಿಸಲು ಹೋದಾಗ ನಾನೂ ಕೂಡಾ ಕೆ.ಎ.ಎಸ್.‌ ಪರೀಕ್ಷೆ ಪಾಸು ಮಾಡಿ ತಹಶೀಲ್ದಾರ್‌ ಆಗಬೇಕೆಂದು ಕನಸು ಕಂಡೆ. ಅದಕ್ಕಾಗಿ ಹಗಲಿರುಳು ಶ್ರಮಪಟ್ಟೆ ಕಡೆಗೆ ನಾನಂದು ಕೊಂಡಂತೆ ತಹಶೀಲ್ದಾರ್‌ ಆದೆ. ಆದ್ದರಿಂದ ವಿದ್ಯಾರ್ಥಿಗಳು ಕನಸು ಮತ್ತು ಗುರಿಯನ್ನು ಇಟ್ಟುಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು.

ಪ್ರೊ. ಗೋವಿಂದರಾಜು ಮತ್ತು ಪ್ರೊ. ಕೆ.ಎಂ.ಪ್ರಸನ್ನಕುಮಾರ್ ಐ.ಎ.ಎಸ್. ಮತ್ತುಕೆ.ಎ.ಎಸ್ ಪರೀಕ್ಷೆಗಳಲ್ಲಿ ಆಂಗ್ಲ ಭಾಷೆಯ ಕೌಶಲ್ಯ ಕುರಿತು ಮಾತನಾಡಿದರು. ವೇದಿಕೆಯ ಮೇಲೆ ಬನ್ನಹಳ್ಳಿ ಕೃಷ್ಣ, ಜೈನಹಳ್ಳಿ ಸತ್ಯನಾರಾಯಣಗೌಡ, ಮ.ನ.ಪಾ ಉಪ ಆಯುಕ್ತರಾದ ಶಿವಾನಂದ, ಪ್ರೊ. ಗೋವಿಂದರಾಜು, ಪ್ರೊ. ಕೃ.ಪ.ಗಣೇಶ್ ಮತ್ತು ಕಾರ್ಮಿಕ ಇಲಾಖೆಯ ಉಪ ಆಯುಕ್ತರಾದ ಎ.ಜೆ. ಶ್ರೀವಲ್ಲಿ ಹಾಜರಿದ್ದರು.  (ಎಸ್.ಎಚ್)

Leave a Reply

comments

Related Articles

error: