ದೇಶಪ್ರಮುಖ ಸುದ್ದಿ

ಅಯೋಧ್ಯೆ ವಿವಾದ: ಜು.31ರವರೆಗೆ ವಿಚಾರಣೆ ಮುಂದುವರಿಸಿ ಮಧ್ಯಸ್ಥಿಕೆ ತಂಡಕ್ಕೆ ಸುಪ್ರೀಂ ಆದೇಶ

ನವದೆಹಲಿ,ಜು.18- ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಲ್ಲಿ ಸಂಧಾನದ ಪರಿಹಾರವನ್ನು ಕಂಡುಹಿಡಿಯಲು ಜು.31 ರವರೆಗೆ ವಿಚಾರಣೆ ಮುಂದುವರಿಸಿ ಎಂದು ಮಾಜಿ ನ್ಯಾಯಮೂರ್ತಿ ಎಫ್ಎಂಐ ಕಲಿಫುಲ್ಲಾ ನೇತೃತ್ವದ ಅಯೋಧ್ಯಾ ಮಧ್ಯಸ್ಥಿಕೆ ತಂಡಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಮಧ್ಯಸ್ಥಿಕೆ ತಂಡ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಅದರಲ್ಲಿನ ವಿಷಯಗಳನ್ನು ಗಮನಿಸಿ ಜುಲೈ 31ರವರೆಗೆ ಸಂಧಾನ ಮುಂದುವರಿಸುವಂತೆ ಸೂಚಿಸಿದೆ.

ಅಲ್ಲದೆ, ಜು.31ರವರೆಗೆ ವಿಚಾರಣೆಯಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬಂದವು ಎಂಬ ಕುರಿತು ಆಗಸ್ಟ್ 1ರೊಳಗೆ ಮಾಹಿತಿ ನೀಡುವಂತೆ ಸಹ ಮಧ್ಯಸ್ಥಿಕೆ ತಂಡಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮಧ್ಯಸ್ಥಿಕೆ ತಂಡ ಸಲ್ಲಿಸಿದ ವರದಿಯನ್ನು ಕೂಲಂಕಷವಾಗಿ ಓದಿದ ಸಾಂವಿಧಾನಿಕ ಪೀಠ, ಈ ಹಿಂದೆ ನೀಡಿದ್ದ ಆದೇಶದಂತೆ ಇದರಲ್ಲಿನ ವಿಷಯಗಳನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದೆ.

ಆದರೂ ಮಧ್ಯಸ್ಥಿಕೆ ತಂಡ ಸಲ್ಲಿಸಿದ ವರದಿಯಲ್ಲಿ ನಮ್ಮ ಗಮನಕ್ಕೆ ಬಂದಿರುವ ವಿಷಯಗಳನ್ನು ತೆಗೆದುಕೊಂಡಾಗ ಕೇಸಿನ ವಿಚಾರಣೆಗೆ ದಿನಾಂಕವನ್ನು ಆಗಸ್ಟ್ 2 ಅಥವಾ ಅದರ ನಂತರ ನಿಗದಿಪಡಿಸಲಾಗುವುದು ಎಂದು ಸಾಂವಿಧಾನಿಕ ಪೀಠ ತಿಳಿಸಿದೆ. (ಎಂ.ಎನ್)

Leave a Reply

comments

Related Articles

error: