
ಪ್ರಮುಖ ಸುದ್ದಿಮೈಸೂರು
ಮೂರನೇ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ರೇವಣ್ಣ ಭೇಟಿ : ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವ ಹೆಚ್.ಡಿ.ರೇವಣ್ಣ
ಮೈಸೂರು,ಜು.19:- ಇಂದು ಮೂರನೇ ಆಷಾಢ ಶುಕ್ರವಾರದ ಪ್ರಯುಕ್ತ ಸಚಿವ ಹೆಚ್.ಡಿ.ರೇವಣ್ಣ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಹಲವು ದಿನಗಳಿಂದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಅವರು ಮೂರನೇ ಆಷಾಢ ಶುಕ್ರವಾರವಾದ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ತಮ್ಮ ಸಹೋದರ ಎಚ್.ಡಿ. ಕುಮಾರಸ್ವಾಮಿಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರಕ್ಕೆ ತೊಂದರೆ ಇಲ್ಲ. ವಿಶ್ವಾಸಮತ ಯಾಚನೆಯನ್ನು ನಾವೇ ಮೊದಲು ಕೇಳಿದ್ದು. ಇಲ್ಲಿ ಯಾರು ಕಾಲಹರಣ ಮಾಡುತ್ತಿದ್ದಾರೆ ಎಂದು ಜನ ನೋಡುತ್ತಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳುತ್ತಾರೆ .ಕಾಂಗ್ರೆಸ್ ನಾಯಕರು ಸಂವಿಧಾನ ಬದ್ಧವಾಗಿ ಮಾತನಾಡುತ್ತ ಇದ್ದಾರೆ. ಸ್ಪೀಕರ್ ನಿರ್ಣಯವೇ ಅಂತಿಮವಾಗಿದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಾಸ ಮತಯಾಚನೆಗೆ 10 ದಿನ ತೆಗೆದುಕೊಂಡಿದ್ದರು ಎಂದರು.
ವಿಶ್ವಾಸಮತ ಯಾಚನೆ ಮಾಡಲು 12ನೇ ತಾರೀಖು ರಾಜ್ಯಪಾಲರ ಬಳಿ ಸಮಯ ಕೇಳಿದ್ದರು. ಅಂದು ಸಭೆಗೆ ಬಿಜೆಪಿಯವರು ಬರಲಿಲ್ಲ. ಅವರು ಬರಲಿಲ್ಲ ಎಂದರೆ ನಾವೇನು ಮಾಡೋಣ. ಆ ನಂತರ 18ನೇ ತಾರೀಖಿಗೆ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಯಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಸ್ಪೀಕರ್ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ತಿಳಿಸಿದರು.
ಇಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಯಾಚನೆ ಬಗ್ಗೆ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)