ಮೈಸೂರು

ಯಾವುದು ಸಾಮಾನ್ಯವೋ ಅವೆಲ್ಲ ದೈವತ್ವಕ್ಕೆ ಘನತ್ವಕ್ಕೆ ಏರುವುದೇ ಇಡೀ ಕಾಲಮಾನದ ಧ್ವನಿಯಾಗಬೇಕು ಎಂದುಕೊಂಡವರು ಕುವೆಂಪು : ಪ್ರೊ.ಎಂ.ಕೃಷ್ಣೇಗೌಡ ಬಣ್ಣನೆ

‘ಕುವೆಂಪು ವ್ಯಕ್ತಿತ್ವ : ವಿಚಾರ ಸಂಕಿರಣ’

ಮೈಸೂರು,ಜು.19:- ಯಾವುದು ಸಾಮಾನ್ಯವೋ ಅವೆಲ್ಲ ದೈವತ್ವಕ್ಕೆ ಘನತ್ವಕ್ಕೆ ಏರುವುದೇ ಇಡೀ ಕಾಲಮಾನದ ಧ್ವನಿಯಾಗಬೇಕು ಎಂದುಕೊಂಡವರು ರಾಷ್ಟ್ರಕವಿ ಕುವೆಂಪು ಎಂದು ಹಿರಿಯ ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಬಣ್ಣಿಸಿದರು.

ಅವರಿಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿ ಕುವೆಂಪು ಕಾವ್ಯಾಧ್ಯಯನ ಪೀಠ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ ವತಿಯಿಂದ ‘ಕುವೆಂಪು ವ್ಯಕ್ತಿತ್ವ : ವಿಚಾರ ಸಂಕಿರಣ’ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕನ್ನಡ ಎಷ್ಟೋ ವರ್ಷಗಳ ನಡಿಗೆಯಿಂದ, ತನ್ನ ಶಕ್ತಿಯಿಂದಾಗಿಯೇ ಕುವೆಂಪು ಅವರನ್ನು ಹುಟ್ಟಿಸಿಕೊಳ್ಳತ್ತೆ. ಸಾವಿರಾರು ವರ್ಷಗಳ ಹರಿವಿನಲ್ಲಿ ಬಂದಿರುವ ಈ ಭಾಷೆ ಬಹಳ ಜನರ ನಾಲಿಗೆಯ ಮೇಲೆ ಜಾಲಾಡಿ ಬಂದು ಬಹಳ ಜನರ ವ್ಯಕ್ತಿತ್ವ ಕಡೆದು ಅವರ ವ್ಯಕ್ತಿತ್ವದಿಂದ ತಾನೂ ಚಾರ್ಜಾಗಿ ಈ ಹೊತ್ತಿಗೆ ಅಂದರೆ ಶತಮಾನಕ್ಕೆ ಬರುವ ಹೊತ್ತಿಗೆ ಬಹಳ ದೊಡ್ಡ ದೊಡ್ಡ ವ್ಯಕ್ತಿತ್ವಗಳನ್ನು ತನ್ನೊಳಗೆ ಹುಟ್ಟಿಸಿಕೊಳ್ಳುವ ಚೈತನ್ಯವನ್ನು ಕನ್ನಡ ಪಡೆದಿದೆ.  ಭಾಷೆ ಸಂವಹಣ ಮಾಧ್ಯಮ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಬದಲಾಗಿದೆ. ಅದನ್ನು ಯಾರೂ ಒಪ್ಪಲ್ಲ. ಭಾಷೆ ದೀರ್ಘಕಾಲದ ಭೂತ-ಭವಿಷತ್-ವರ್ತಮಾನಗಳ ಸ್ಮೃತಿಯಲ್ಲಿ ಅಡಗಿ ಕುಳಿತಿರುವ ಒಂದು ಅತ್ಯದ್ಭುತ ಸಂಗತಿ. ಭಾಷೆ 20ನೇ ಶತಮಾನದಲ್ಲಿ ಕುವೆಂಪು ಅಂಥಹವರನ್ನೇ ಹುಟ್ಟಿಸಿಕೊಳ್ಳತ್ತೆ. ಕುವೆಂಪು ಅವರು ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದೇ ಕೊಳಲು ಕವನ ಸಂಕಲನದ ಮೂಲಕ. ‘ಕಾಡಿನ ಕೊಳಲಿದು, ಕಾಡ ಕವಿಯು ನಾ’ಎಂಬ ಮುನ್ನುಡಿಯೊಂದಿಗೆ ಪ್ರವೇಶಿಸಿದರು ಎಂದರು.

ಕುವೆಂಪು ಅಂತಹ ಲೇಖಕ ಕನ್ನಡದಲ್ಲಿ ಬರೆಯೋದು ಆರಂಭ ಮಾಡಿದ್ದೇ ಒಂದು ದೊಡ್ಡ ಘಟನೆ. ಯಾಕೆಂದರೆ ಅವರು ಬಂದಿದ್ದು ಮಲೆನಾಡಿನಿಂದ.  ನಾಗರಿಕ ಪರಿಸರಕ್ಕೆ ಪ್ರತ್ಯೇಕ ಎಂಬ ವಾತಾವರಣದಲ್ಲಿ ಹುಟ್ಟಿದವರು. ಆಗಿನ ಮಲೆನಾಡು ಯಾವಾಗಲೂ ಕಗ್ಗತ್ತಲು. ಜೀರುಂಡೆ, ಹಕ್ಕಿ, ಪಕ್ಷಿ, ಪ್ರಾಣಿಯೊಳಗಿನ ಹೊತ್ತ ಕತ್ತಲಿದು. ಅಕ್ಷರ ಇನ್ನೂ ಪ್ರವೇಶ ಮಾಡಿರಲಿಲ್ಲ. ಬೇಕಾದಷ್ಟು ಮೌಢ್ಯವಿತ್ತು. ಅಜ್ಞಾನವಿತ್ತು. ಆ ಅಜ್ಞಾನ ಮೌಢ್ಯದ ನಡುವೆಯೇ ಪುಟ್ಟಪ್ಪನೆಂಬ ಹುಡುಗ ಇತಿಹಾಸದಲ್ಲಿ ಏರಿದ, ಎತ್ತರ ಮಾಡಿದ ಸಾಧನೆಗೆ 20ನೇ ಶತಮಾನದಲ್ಲಿ ಆಗುತ್ತಿದ್ದ ಒಂದು ಪಲ್ಲಟಕ್ಕೆ ಪ್ರತೀಕವಾಗತ್ತೆ ಎಂದರು. ಅವರು ಮೈಸೂರು ವಿವಿಯಲ್ಲಿದ್ದ ಸಮಯದಲ್ಲಿ ಮೈಸೂರು ಮಹಾರಾಜರೇ ಕುಲಾಧಿಪತಿಗಳಾಗಿದ್ದ ಸಂದರ್ಭದಲ್ಲಿ ಒಂದು ಹನಿಯನ್ನು ನೋಡಿ ಕುವೆಂಪುರವರು ಬರೆಯುತ್ತಾರೆ. ‘ಇದರ ಮುಂದೆ ಅರಸನ ಸಿರಿಯೇ?’  ‘ಕಬ್ಬಿಗನ ಕಾಲ್ಗಳಡಿ ವಿಫುಲ ಸಂಪತ್ತು’ ಎನ್ನುವ ದಾರ್ಷ್ಯ ಮೆರೆದವರು. ಅವರು ವಿವಿ ಕುಲಪತಿಯಾಗಿದ್ದಾಗ ನಿಜಲಿಂಗಪ್ಪನವರು ಸಿಎಂ ಆಗಿದ್ದು ಭೇಟಿಯಾಗಬೇಕಾದ ಪ್ರಸಂಗ ಬರತ್ತೆ. ಆಗ ಕುವೆಂಪು ಯಾರ ಮೂಲಕವೋ ಸಿಎಂ ಬಳಿ ಸಮಯ ಕೇಳಿ ಕಳುಹಿಸುತ್ತಾರೆ, ಅದಕ್ಕೆ ನಿಜಲಿಂಗಪ್ಪನವರು ಹೌಹಾರಿ ಬಿಡ್ತಾರೆ. ಮೈಸೂರಿನಿಂದ ಬೆಂಗಳೂರಿಗೆ ಬಂದು ಭೆಟಿ ಮಾಡುವುದಾ? ನಾನೇ ಬಂದು ಭೇಟಿ ಮಾಡುತ್ತೇನೆ. ವಿವಿಯ ವಿಷಯವಿದ್ದರೆ ಶಿಕ್ಷಣ ಸಚಿವರನ್ನೇ ಅವರ ಬಳಿ ಕಳುಹಿಸುತ್ತೇನೆ. ನನ್ನನ್ನು ಭೇಟಿಯಾಗಲು ಅಷ್ಟು ದೊಡ್ಡ ವ್ಯಕ್ತಿ ಬರುವುದು ಬೇಡ ಎಂದಿದ್ದರಂತೆ. ಇದು ಸಾರ್ವಜನಿಕವಾಗಿ ಕುವೆಂಪು ಅವರಿಗೆ ಸಿಕ್ಕ ಗೌರವ. ಮೈಸೂರಿನಲ್ಲಿದ್ದಾಗ ಅವರು ಬೆಳಿಗ್ಗೆ ವಿಹಾರಕ್ಕೆ ಹೊರಟರೆ ಹೆಂಗಳೆಯರು ಮನೆಯ ಮುಂದೆ ನೀರು ಹಾಕಿ ರಂಗವಲ್ಲಿ ಬಿಡಿಸಿ ದೀಪವಿಟ್ಟು ಮಕ್ಕಳನ್ನು ನಿಲ್ಲಿಸುತ್ತಿದ್ದರು. ಕುವೆಂಪು ತಾತಾ ಬರ್ತಾರೆ ನೋಡುತ್ತಿರಿ ಎಂದು ಅವರು ಬರುವಾಗ ಖಾಲಿಯಾಗಿ ಬಣಬಣ ಎನ್ನಬಾರದು ಎನ್ನುವ ದೃಷ್ಟಿಯಲ್ಲಿ. ಅದನ್ನು ನಾನೇ ಕಣ್ಣಾರೆ ಕಂಡಿದ್ದೇನೆ ಎಂದು ವಿವರಿಸಿದರು.

ಎಲ್ಲ ವಿನಾಶದಲ್ಲಿಯೂ ಇನ್ನೊಂದು ಸೃಷ್ಟಿಯಿರತ್ತೆ ಎಂದು ಶ್ರೀರಾಮಾಯಣ ದರ್ಶನಂ ಕೃತಿ ಕಟ್ಟಿದರು. ಎಲ್ಲವೂ ಜಂಗಮವೇ. ಯಾವುದೂ ಜಡವಲ್ಲ. ಅವರ ಗದ್ಯ ಬರಕ್ಕೆ ಬಂದಾಗ ಎಲ್ಲ ಸಾಮಾನ್ಯರನ್ನು ಕೂಡ ಬಹಳ ಮುಖ್ಯವೆಂದು  ಭಾವಿಸ್ತಾರೆ. ಕಾವ್ಯ ಸಾಮಾನ್ಯನ ಉದ್ಧಾರಕ್ಕಾಗಿ. ಯಾವುದು ಸಾಮಾನ್ಯವೋ ಅವೆಲ್ಲ ದೈವತ್ವಕ್ಕೆ ಘನತ್ವಕ್ಕೆ ಏರುವುದೇ ಇಡೀ ಕಾಲಮಾನದ ಧ್ವನಿಯಾಗಬೇಕು ಎಂದುಕೊಂಡಿದ್ದರು ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್, ಕಾವ್ಯಾಧ್ಯಯನಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎನ್.ಬೋರಲಿಂಗಯ್ಯ, ಹಿರಿಯ ಸಾಹಿತಿ ಡಾ.ಸಿ.ನಾಗಣ್ಣ, ಡಾ.ಕುಪ್ಪಳ್ಳಿ ಎಂ ಭೈರಪ್ಪ, ಡಾ.ಆರ್.ಛಲಪತಿ, ಕೆ.ಗೋವಿಂದರಾಜು, ಡಾ.ನೀಲಗಿರಿ ತಳವಾರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: