
ಕರ್ನಾಟಕಪ್ರಮುಖ ಸುದ್ದಿ
28 ಕೋಟಿ ರೂ.ಗೆ ಬಿಜೆಪಿಗೆ ಸೇಲ್ ಆರೋಪ: ಸಾ.ರಾ.ಮಹೇಶ್ ವಿರುದ್ಧ ಕಾನೂನು ಕ್ರಮ; ವಿಶ್ವನಾಥ್
ಬೆಂಗಳೂರು,ಜು.19-ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಅತೃಪ್ತ ಶಾಸಕ ಎಚ್.ವಿಶ್ವನಾಥ್ 28 ಕೋಟಿ ರೂ.ಗೆ ಬಿಜೆಪಿಗೆ ಸೇಲ್ ಆಗಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ಮಾಡಿರುವ ಆರೋಪಕ್ಕೆ ವಿಶ್ವನಾಥ್ ಕಿಡಿಕಾರಿದ್ದಾರೆ.
ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಅವರು, ಸದನದಲ್ಲಿ ನನ್ನ ಮೇಲೆ ಈ ರೀತಿ ಆರೋಪ ಮಾಡಿರುವ ಸಾ.ರಾ.ಮಹೇಶ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಅಲ್ಲದೆ, ಸದನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ ಎಂದಿದ್ದಾರೆ.
ಸಾ.ರಾ.ಮಹೇಶ್ ಆರೋಪದಿಂದ ಮನಸಿಗೆ ತೀರಾ ನೋವಾಗಿದೆ. ಇದು ಸಾರಾ ಮಹೇಶ್ ಅವರು ಹೇಳಿದ್ದಲ್ಲ. ಅವರಿಂದ ಹೇಳಿಸಿದ್ದು. ಕಿಚನ್ ಕ್ಯಾಬಿನೆಟ್ ಇದೆಯಲ್ಲ, ಅವರೇ ಇದನ್ನು ಹೇಳಿಸಿರುತ್ತಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಕಾನೂನು ಸಮರ ನಡೆಸುತ್ತೇನೆ ಎಂದು ಹೇಳಿದರು.
ಸದನದಲ್ಲಿ ಮಾಡಿರುವ ಆರೋಪವನ್ನು ಮೈಸೂರಿನ ದೀಪಕ್ ಎಂಬಾತನ ಖಾಸಗಿ ಚಾನೆಲ್ನಲ್ಲಿ ಮಾಡಿಸಿದ್ದರು. ಆತನ ಮೇಲೂ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಆತ ಅಲ್ಲಿ ಹೇಳಿದ್ದನ್ನೇ ಯಥಾವತ್ತಾಗಿ ಸಾ.ರಾ.ಮಹೇಶ್ ಇಲ್ಲಿ ಹೇಳಿದ್ದಾರೆ ಎಂದರು.
ಸಾ.ರಾ.ಮಹೇಶ್ ಒಬ್ಬ ಜಾತಿವಾದಿ ಮತ್ತು ದುರಹಂಕಾರಿ. ಅವರು ದುರಹಂಕಾರದಿಂದ ಮಾತನಾಡಿದ್ದಾರೆ. ನಾನು ಸದನದಲ್ಲಿ ಗೈರು ಹಾಜರಾಗಿರುವುದು ತಿಳಿದಿದ್ದರೂ, ನನ್ನ ವಿಚಾರದ ಕುರಿತು ಮಾತನಾಡಲು ಅವಕಾಶ ನೀಡಿರುವುದು ಏಕೆ? ಮುಂದೆ ಸದನಕ್ಕೆ ಬಂದಾಗ ಎಲ್ಲವನ್ನೂ ತೆರೆದಿಡುತ್ತೇನೆ. ಈ ಪಕ್ಷದವರು ನೀಡಿರುವ ಸವಾಲನ್ನು ನಾನು ಎದುರಿಸುತ್ತೇನೆ. ನಾನು ಯಾರು ಎಂಬುದನ್ನು ಮುಂದೆ ತೋರಿಸುತ್ತೇನೆ ಎಂದು ಹೇಳಿದರು.
ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಮಾತನಾಡಿದಾಗ ನಾನು ಅವರನ್ನು ತೋಟದಲ್ಲಿ ಭೇಟಿಯಾಗಿ ನಿಮಗೆ ಮಂತ್ರಿ ಆಗುವ ಆಸೆ ಇದೆಯೇ ಎಂದು ಕೇಳಿದ್ದೆ. ಅದಕ್ಕೆ ಉತ್ತರಿಸಿದ ವಿಶ್ವನಾಥ್ ಹಾಗೇನೂ ಇಲ್ಲ. ಈ ಚುನಾವಣೆಯಲ್ಲಿ ಕೆಲವು ಸಾಲ ಮಾಡಿಕೊಂಡಿದ್ದೇನೆ. ಇದೇ ಸಮಯದಲ್ಲಿ ಬಿಜೆಪಿಯವರು ಪಕ್ಷಕ್ಕೆ ಬಂದರೆ 28 ಕೋಟಿ ರೂ. ಕೊಡುತ್ತೇನೆ ಎಂದಿದ್ದಾರೆ ಎಂದು ತಮ್ಮ ಬಳಿ ಅಂದು ತಿಳಿಸಿದ್ದರು ಎಂಬುದಾಗಿ ಸಾ.ರಾ.ಮಹೇಶ್ ಹೇಳಿದ್ದರು.
ನಾನು ಸದನದಲ್ಲಿ ಈಗ ಹೇಳುತ್ತಿರುವುದೆಲ್ಲ ಸತ್ಯ. ವಿಶ್ವನಾಥ್ ಅವರನ್ನು ಕರೆಸಿ ನಾನು ಅವರ ಎದುರುಗಡೆಯೂ ಇದನ್ನು ಹೇಳುತ್ತೇನೆ. ನಾನು ಇಷ್ಟು ಹೊತ್ತು ಹೇಳಿದ್ದು, ನನ್ನ ತಾಯಿಯ ಆಣೆಗೂ, ನನ್ನ ಮಕ್ಕಳ ಆಣೆಗೂ ಸತ್ಯ. ಅಂದು 28 ಕೋಟಿ ರೂ. ಆಫರ್ ತಿರಸ್ಕರಿಸಿದೆ ಎಂದಿದ್ದ ವಿಶ್ವನಾಥ್ ಈಗ ಎಷ್ಟಕ್ಕೆ ಸೇಲ್ ಆಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಅವರನ್ನು ಸದನಕ್ಕೆ ಕರೆಸಿ ಎಂದು ಹೇಳಿದ್ದರು.
ಇನ್ನು ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ವಿಶ್ವನಾಥ್ ಅವರು ಸದನದಲ್ಲಿ ಇಲ್ಲದೆ ಇರುವಾಗ ಸಾ.ರಾ.ಮಹೇಶ್ ಆರೋಪ ಮಾಡಿದ್ದಾರೆ. ವಿಶ್ವನಾಥ್ ಒಬ್ಬ ಪ್ರಾಮಾಣಿಕ ವ್ಯಕ್ತಿ. ಅವರು ಬಂದ ಬಳಿಕ ಸದನದಲ್ಲಿ ಎಲ್ಲವನ್ನೂ ಚರ್ಚಿಸುತ್ತೇವೆ. ಸಾ.ರಾ.ಮಹೇಶ್ ಅವರು ತಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪಡಿಸಲಿ. ಅವರು ವಿಶ್ವನಾಥ್ ಅವರ ಕ್ಷಮೆಯಾಚಿಸಲಿ. ಶ್ರೀನವಾಸ ಗೌಡ ಅವರದ್ದು ದುರುದ್ದೇಶದ ಹೇಳಿಕೆ. ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದರು. (ಎಂ.ಎನ್)