ಮೈಸೂರು

ಪರಿಶಿಷ್ಟರ ಬಡ್ತಿ ಮೀಸಲಾತಿ ಪುನರ್ ಪರಿಶೀಲನೆಗೆ ಒತ್ತಾಯ

ಸುಪ್ರೀಂ ಕೋರ್ಟ್ ಬಡ್ತಿ ಮೀಸಲಾತಿಯನ್ನು ಹಿಂಪಡೆದಿರುವುದರಿಂದ ಪರಿಶಿಷ್ಟರಿಗೆ ಆನ್ಯಾಯವಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಪುನರ್ ಪರಿಶೀಲನೆಗೊಳಪಡಿಸಬೇಕೆಂದು  ಮಾಜಿ ಮಹಾಪೌರ ಪುರುಷೋತ್ತಮ ಒತ್ತಾಯಿಸಿದ್ದಾರೆ.

ಪತ್ರಕರ್ತರ ಭವನದಲ್ಲಿ ಮಾತನಾಡಿ ಕಳೆದ ಫೆ.9ರಂದು ಸುಪ್ರೀಂ ಕೋರ್ಟಿನ ತೀರ್ಪು ಪರಿಶಿಷ್ಟರನ್ನು ಧಮನಿಸುವಂತಾಗಿದೆ. ಸಮಾಜದಲ್ಲಿ ಇಂದಿಗೂ ಸಮಾನತೆ ಇಲ್ಲ. ಪರಿಶಿಷ್ಟರನ್ನು ಅಸ್ಪೃಶ್ಯತೆಯಿಂದಲೇ ನೋಡಲಾಗುತ್ತಿದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದರೂ ಉನ್ನತ ಸ್ಥಾನಗಳಲ್ಲಿ, ಕೇಂದ್ರ ಸರ್ಕಾರದ ಹಿರಿಯ ಶ್ರೇಣಿ ಹುದ್ದೆಗಳಲ್ಲಿ, ಕಾರ್ಯದರ್ಶಿಗಳಲ್ಲಿ ಕೇವಲ ಬೆರಳೆಣಿಕೆ ಜನರಿಗೆ ಮಾತ್ರ ಅವಕಾಶ ಲಭಿಸಿದೆ. ಐ.ಎ.ಎಸ್. ಐಪಿಎಸ್‍ನಲ್ಲಿ ಕೇವಲ 13% ರಷ್ಟು ಮಂದಿಗೆ ಬಡ್ತಿ ನೀಡಲಾಗಿದೆ. ಅಲ್ಲದೇ ಪ್ರತಿಯೊಂದು ರಂಗವೂ ಖಾಸಗೀಕರಣಗೊಳ್ಳುತ್ತಿದ್ದು ಅಲ್ಲಿಯೂ ಮೀಸಲಾತಿ ಕಲ್ಪಿಸಬೇಕು ಅಲ್ಲದೇ  ಕೇಂದ್ರ ಸರ್ಕಾರ ಮೀಸಲಾತಿ ನಿರ್ಬಂಧಿಸಲು ಹಂತ ಹಂತವಾಗಿ ಕ್ರಮ ಜರುಗಿಸುತ್ತಲೇ ಇದೆ ಎಂದು ದೂರಿದರು.

ಸಮಾನತೆ ಬೇಕು : ಸಮಾನತೆ ಇದ್ಷರೆ ಮೀಸಲಾತಿ ನಮಗೂ ಬೇಕಿಲ್ಲ ಎಂದ ಅವರು, ಅಸಮಾನತೆಯಿಂದಾಗಿ ಸಮುದಾಯವನ್ನು ಮೀಸಲಾತಿಗೆ ಒಳಪಡಿಸಲಾಗಿದೆ. ಇಂದು ಶೈಕ್ಷಣಿಕವಾಗಿ ಬೆಳೆದಿದ್ದರೂ ಉದ್ಯೋಗ ಹಾಗೂ ಬದುಕಿನ ಭದ್ರತೆ ಇಲ್ಲ. ಸ್ವಾತಂತ್ರ್ಯ ಪಡೆದು 71 ವರ್ಷಗಳೂ ಕಳೆದರು ರಾಷ್ಟ್ರದಲ್ಲಿ ಅಸ್ಪೃಶ್ಯತೆ ಹಾಗೂ ಅಸಮಾನತೆ ತೊಲಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ದೇಶ ಜಾತಿ-ಧರ್ಮದಿಂದ ಮುಕ್ತವಾದಾಗ ಮಾತ್ರ ಸಮಾನ ಅವಕಾಶ ಸಾಧ್ಯವಾಗಲಿದ್ದು, ಮೀಸಲಾತಿಯನ್ನು ಹಿಂಪಡೆಯಬಹುದು ಎಂದರು.

ಹೋರಾಟ : ಬಡ್ತಿ ಮೀಸಲಾತಿ ಬಗ್ಗೆ ಸರ್ಕಾರಗಳು, ಉಚ್ಚ ಹಾಗೂ ಸರ್ವೋಚ್ಛ ನ್ಯಾಯಾಲಯಗಳು ಕೂಲಂಕುಷ ಪರಿಶೀಲಿಸದೇ ದ್ವಂದ್ವ ಹೇಳಿಕೆಗಳ ತೀರ್ಪುನ್ನು ನೀಡಬಾರದೆಂದು ಮನವಿ ಮಾಡಿ ತೀರ್ಪಿನ ಬಗ್ಗೆ ಮುಖ್ಯಮಂತ್ರಿಗಳು, ಬುದ್ದಿಜೀವಿಗಳು ಹಾಗೂ ನಾಯಕರು ಮತ್ತೊಮ್ಮೆ ಪರಿಶೀಲಿಸಬೇಕು ಎಂದರು. ರಾಜ್ಯದಲ್ಲಿ ಯಾವೊಬ್ಬ ಪರಿಶಿಷ್ಟರ ಬಡ್ತಿ ಹಿಂಪಡೆದರೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ರಾಮಣ್ಣ, ನ್ಯಾಯವಾದಿ ಶೋಭರಾಜು, ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ್ ಹಾಜರಿದ್ದರು.

Leave a Reply

comments

Related Articles

error: