ಮೈಸೂರು

ಸಾಧನೆಗೆ ಯಾವುದೇ ಅಡ್ಡ ಮಾರ್ಗಗಳಿಲ್ಲ : ಪ್ರೊ. ವಿದ್ಯಾಶಂಕರ್

ಮೈಸೂರು,ಜು.20:- ನಮ್ಮ ಎದುರಿಗೆ ಸಾಕಷ್ಟು ನಕರಾತ್ಮಕ ಅಂಶಗಳು ಇದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೇ, ನಮ್ಮ ಗುರಿಯತ್ತ ಹೆಚ್ಚು ಗಮನಹರಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ವಿದ್ಯಾಶಂಕರ್ ಹೇಳಿದರು.

ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನಿನ್ನೆ ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ 2019ರ ಐಎಎಸ್/ಕೆಎಎಸ್ ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದ ಶುಭಹಾರೈಕೆ ಸಮಾರಂಭದಲ್ಲಿ ಮಾತನಾಡಿದರು.

ನಗರದ ಪ್ರದೇಶದ ಬಹಳಷ್ಟು ವಿದ್ಯಾರ್ಥಿಗಳಿಗೆ ಎಲ್ಲವೂ ಸುಲಭವಾಗಿ ಸಿಗಬೇಕು ಎಂಬ ಮನೋಭಾವವಿದೆ. ಆದರೆ ಇದು ಸರಿಯಾದುದಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಕಲಿಯಬೇಕು, ಉನ್ನತ ಹುದ್ದೆ ಪಡೆಯಬೇಕು ಎಂಬ ಆಸೆ, ಕನಸು ಹಾಗೂ ಧಾವಂತ ಇರುತ್ತದೆ. ಈ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಹಂತದಲ್ಲಿರುವಾಗಲೇ ಸಿಗುವ ಪ್ರೇರಣೆ ಬಹಳ ಮುಖ್ಯವಾಗಿರುತ್ತದೆ. ಪ್ರೇರಣೆ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಕನಸು ಕಾಣುವ ಜೊತೆಗೆ ಕನಸನ್ನು ಸಾಕಾರ ಮಾಡಿಕೊಳ್ಳುವ ಇಚ್ಛಾಶಕ್ತಿಯನ್ನು ಹೊಂದಿರಬೇಕು. ನಮ್ಮ ಎದುರಿಗೆ ಸಾಕಷ್ಟು ನಕರಾತ್ಮಕ ಅಂಶಗಳು ಇದ್ದರೂ, ಅವುಗಳನ್ನು ಗಣನೆಗೆ ತೆಗೆದುಕೊಳ್ಳದೇ, ನಮ್ಮ ಗುರಿಯತ್ತ ಹೆಚ್ಚು ಗಮನಹರಿಸಬೇಕು ಎಂದು ಸ್ಪರ್ಧಾರ್ಥಿಗಳಿಗೆ ಕಿವಿಮಾತು ಹೇಳಿದರು.

ಐಎಎಸ್, ಐಪಿಎಸ್‍ನಂತಹ ಪರೀಕ್ಷೆಗಳನ್ನು ಎದುರಿಸಲು ತರಬೇತಿಗಾಗಿ ದೆಹಲಿಗೆ ತೆರಳಬೇಕು ಎಂದೇನಿಲ್ಲ. ನಮ್ಮಲ್ಲಿ ಓದುವ ಛಲ ಮತ್ತು ಪರಿಶ್ರಮ ಇದ್ದರೆ, ಎಲ್ಲಿಯಾದರೂ ಕುಳಿತು ಓದಬಹುದು. ಸಾಕಷ್ಟು ಮಂದಿ ಮನೆಯಲ್ಲಿ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿರುವ ಕೋಚಿಂಗ್ ಸೆಂಟರ್‍ಗಳಲ್ಲಿ ಓದಿ ಯಶಸ್ಸುಗಳಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಉಪ ಅರಣ್ಯಸಂರಕ್ಷಣಾಧಿಕಾರಿಗಳಾದ ಡಾ. ಕೆ.ಸಿ. ಪ್ರಶಾಂತ್ ಕುಮಾರ್ ಐ.ಎಫ್.ಎಸ್. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಯುಪಿಎಸ್‍ಸಿ ಪರೀಕ್ಷೆ ಎಂಬುದು ಗಗನಕುಸುಮವಲ್ಲ, ಸಾಧನೆ ಮಾಡುವ ಮನಸ್ಸಿದ್ದರೆ ಅದು ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿ ಎಂದರು.

ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಸ್ವಾತಂತ್ರ್ಯ ಬಂದು ಇಲ್ಲಿಯವರೆಗೆ ಶಿಕ್ಷಣ ತಲುಪಬೇಕಾದ ಎತ್ತರವನ್ನು ತಲುಪಿಲ್ಲ. ಹಣ ಮತ್ತು ಅಧಿಕಾರಕ್ಕಿಂತ ಜ್ಞಾನ ಮಿಗಿಲಾದುದು ಎಂಬ ಮನೋಭಾವ ಜನರಲ್ಲಿ ಬರುವಂತಾಗಬೇಕು. ಆಗ ಮಾತ್ರ ಶಿಕ್ಷಣ ಕ್ರಾಂತಿಯಾದಂತಾಗುತ್ತದೆ ಎಂದರು. ದೇಶದಲ್ಲಿ ನಿರುದ್ಯೋಗ ಎನ್ನುವುದೇ ತಮಾಷೆ ವಿಚಾರ. ಸಾಕಷ್ಟು ಕ್ಷೇತ್ರಗಳಲ್ಲಿ ಕೆಲಸ ಮಾಡುವವರೆ ಇಲ್ಲ ಎಂಬ ದೂರುಗಳಿವೆ. ಜೊತೆಗೆ ನಿರುದ್ಯೋಗವೂ ಇದೆ ಎಂಬ ಮಾತುಗಳೂ ಇವೆ. ಇದು ದೇಶದ ವಿಚಿತ್ರ. ನಾವು ನಿಗದಿಪಡಿಸಿಕೊಂಡ ಗುರಿಗೆ ಹೆಚ್ಚು ಗಮನ ನೀಡಬೇಕು. ಜ್ಞಾನ ಮತ್ತು ಕೌಶಲವನ್ನು ಬೆಳೆಸಿಕೊಳ್ಳದಿದ್ದರೆ ನಾವು ಎಲ್ಲಿಯೂ ಸಲ್ಲುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ದೇವರಾಜ್, ಕೆ.ಎ.ಎಸ್. ಅಧಿಕಾರಿ ಬಲ್ಲೇನಳ್ಳಿ ಶಂಕರ್, ಪ್ರೊ. ವಿಜಯ್ ಮತ್ತು ಪ್ರೊ. ಕೃ.ಪ.ಗಣೇಶ್, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಎಚ್. ಬಾಲಕೃಷ್ಣ ಸೇರಿದಂತೆ ಮತ್ತಿತರರು ಇದ್ದರು. (ಎಸ್.ಎಚ್)

Leave a Reply

comments

Related Articles

error: