
ಮೈಸೂರು
ಸಿದ್ದರಾಮಯ್ಯ ಹಠಾವೋ – ಕರ್ನಾಟಕ ಬಚಾವೋ : ಬಿಜೆಪಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಫೆ.15ರಿಂದ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ನಡುವೆ ನಡೆದ ಸಂಭಾಷಣೆಯ ಸಿಡಿಯನ್ನು ತಿರುಚಿ ಬಿಜೆಪಿ ಮುಖಂಡರ ವಿರುದ್ಧ ಷಡ್ಯಂತರ ನಡೆಸಲಾಗಿದೆ. ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ‘ಸಿದ್ದರಾಮಯ್ಯ ಹಠವೋ-ಕರ್ನಾಟಕ ಬಚಾವೋ’ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ರಾಜೇಶ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಮಾತನಾಡಿ ಚಳುವಳಿಯನ್ನು ಫೆ.15ರ ಬೆಳಿಗ್ಗೆ ಗಾಂಧಿ ಚೌಕದ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಳ್ಳಲಾಗಿದ್ದು, ಆಮರಣಾಂತ ಉಪವಾಸವನ್ನು ನಡೆಸಲಾಗುವುದು ಎಂದು ತಿಳಿಸಿದರು. ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ಸಿಡಿಯನ್ನು ತಿರುಚಲಾಗಿದ್ದು ನನ್ನ ಬಳಿ ಸಾಕ್ಷಿ ಪುರಾವೆಯಿದೆ ಎಂದ ಅವರು, ಈ ಪ್ರಕರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಥಾನಕ್ಕೆ ಮುಳುವಾಗಲಿದೆ. ಆಣೆ ಪ್ರಮಾಣದಲ್ಲಿ ನಂಬಿಕೆಯಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಹುದ್ದೆಯನ್ನಲಂಕರಿಸುವ ಸಂದರ್ಭದಲ್ಲಿ ಪ್ರಮಾಣ ವಚನವನ್ನೇ ಸ್ವೀಕರಿಸಬಾರದಿತ್ತು ಎಂದು ವ್ಯಂಗ್ಯವಾಡಿದರು. ಸಚಿವ ಹೆಚ್.ಸಿ.ಮಹದೇವಪ್ಪನವರ ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 6 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಒಂದು ಸಾವಿರ ಕೋಟಿ ಪಕ್ಷದ ವರಿಷ್ಠರಿಗೆ ಹೋದರೆ ಉಳಿದ 5 ಸಾವಿರ ಕೋಟಿ ರೂಪಾಯಿ ಎಲ್ಲೋಯಿತು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ರಾಜ್ಯ ಖಜಾನೆಯನ್ನು ಲೂಟಿ ಮಾಡಲಾಗಿದೆ ಎಂದು ದೂರಿದರು.
“ನೀವು ಕೊಟ್ಟೇವು…ನಾವು ಕೊಟ್ಟೇವು.. ಆದರೆ ಸಾವಿರ ಕೋಟಿಯಲ್ಲ” ಎಂದು ಬಿಎಸ್ವೈ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ನಡುವೆ ನಡೆದಿರುವ ಸಂಭಾಷಣೆಯನ್ನು ತಿರುಚಿ ಮಾಧ್ಯಮಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು ಸಿ ಎಂ. ಡೈರಿ ಪ್ರಕರಣಕ್ಕೆ ಹೆದರಿ ಈ ಷಡ್ಯಂತ್ರ ನಡೆಸಿದ್ದಾರೆಂದು ಆರೋಪಿಸಿದರು.
ರಾಜ್ಯದಲ್ಲಿ ಲೋಕಾಯುಕ್ತ ಹಾಗೂ ಎಸಿಪಿಯನ್ನು ನಿಷ್ಕ್ರಿಯಗೊಳಿಸಿದ್ದು ಭ್ರಷ್ಟಾಚಾರವು ನಿರಾತಂಕವಾಗಿ ನಡೆಯುತ್ತಿದೆ, ಸಾಕ್ಷಿಯಾಧಾರಗಳನ್ನು ತಿರುಚುವ ಕಾರ್ಯವೂ ನಿರಂತರವಾಗಿ ನಡೆಯುತ್ತಲೇ ಇದೆ, ಆದಾಯ ತೆರಿಗೆ ದಾಳಿಗೊಳಗಾದ ಸಿಎಂ ಆಪ್ತ ಚಿಕ್ಕರಾಯಪ್ಪನ ವಿರುದ್ಧ ಕ್ರಮ ಜರುಗಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಹಲವಾರು ಹಗರಣಗಳಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದು ತತ್ಕ್ಷಣವೇ ರಾಜೀನಾಮೆ ನೀಡಿ ಜನಾದೇಶಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಉಪಚುನಾವಣೇ ಗಿಮಿಕ್ : ನಂಜನಗೂಡು ಉಪಚುನಾವಣೆಯನ್ನು ಕೇಂದ್ರೀಕರಿಸಿ 175 ಕೋಟಿ ರೂಪಾಯಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿರುವುದು ಕಾನೂನು ಬಾಹಿರವಾಗಿ ಅನುದಾನ ಬಿಡುಗಡೆಗೊಳಿಸಿ ಲೋಕೋಪಯೋಗಿ ಇಲಾಖೆಯನ್ನು ಹಾಗೂ ಮುಖ್ಯಮಂತ್ರಿಗಳ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದ್ದು ರಾಜ್ಯ ಸರ್ಕಾರ ವ್ಯಾಪಕ ಭ್ರಷ್ಟಾಚಾರ ಹಾಗೂ ಹಗರಣಗಳಲ್ಲಿ ಸಿಲುಕಿದ್ದು ಜನಾದೇಶವೊಂದೇ ಪರಿಹಾರ ಮಾರ್ಗವೆಂದರು.
ಮಾಹಿತಿ ಹಕ್ಕು ಕಾರ್ಯಕರ್ತ ಆರ್.ಬಿ.ಬಸವೇಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಧರ್ ಮೂರ್ತಿ, ಬಿಜೆಪಿ ಮುಖಂಡ ಕೆ.ಎಂ.ಜಗದೀಶ್ ಹಾಗೂ ಇತರರು ಹಾಜರಿದ್ದರು.