ಪ್ರಮುಖ ಸುದ್ದಿ

ಮಳೆಹಾನಿ ಸಂತ್ರಸ್ತರಿಗೆ ಎಸ್‍ಕೆಎಸ್‍ಎಸ್‍ಎಫ್‍ನಿಂದ ಆರ್ಥಿಕ ನೆರವು

ರಾಜ್ಯ(ಮಡಿಕೇರಿ) ಜು.20 : – ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ವಿವಿಧ ಧರ್ಮಗಳ ಏಳು ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಲು ಎಸ್‍ಕೆಎಸ್‍ಎಸ್‍ಎಫ್ ಮುಂದಾಗಿದೆ. ಪ್ರಥಮ ಕಂತಿನಲ್ಲಿ ಒಟ್ಟು 3.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಿಸ್ಬಾಹಿ ಎಮ್ಮೆಮಾಡು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ ಸಾಲಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಘಟನೆಯ ಮುಖಂಡರು ಭೇಟಿ ನೀಡಿ, ಪ್ರವಾಹದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿ, ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ 1 ಲಕ್ಷ ರೂ.ಗಳಿಗೂ ಅಧಿಕ ಮೊತ್ತವನ್ನು ವಿತರಿಸಿದ್ದರು. ಪ್ರಸಕ್ತ ಕೇಂದ್ರ ಸಮಿತಿ ವತಿಯಿಂದ ಪ್ರತಿ ಕುಟುಂಬಕ್ಕೆ ತಲಾ 50 ಸಾವಿರ ರೂ.ಗಳಂತೆ ಮೊದಲ ಕಂತಿನಲ್ಲಿ ಏಳು ಕುಟುಂಬಗಳಿಗೆ ಒಟ್ಟು 3.50 ಲಕ್ಷ ರೂ.ಗಳನ್ನು ವಿತರಿಸಲಾಗುವುದೆಂದು ತಿಳಿಸಿದರು.

ಜು.23 ರಂದು ಬೆಳಿಗ್ಗೆ 10.30 ಕ್ಕೆ ಕುಶಾಲನಗರದ ದಾರುಲ್ ಉಲಮಾ ಅಡಿಟೋರಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕುಶಾಲನಗರದ 6 ಹಾಗೂ ಕೊಡ್ಲಿಪೇಟೆಯ ಒಂದು ಕುಟುಂಬಕ್ಕೆ ಪರಿಹಾರ ನಿಧಿಯನ್ನು ಹಸ್ತಾಂತರಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಉಪ ಖಾಝಿ ಅಬ್ದುಲ್ಲಾ ಫೈಝಿ ವಹಿಸಲಿದ್ದು, ಕುಶಾಲನಗರದ ವೃತ್ತ ನಿರೀಕ್ಷಕ ಕುಮಾರ ಆರಾಧ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಎಸ್‍ಕೆಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಅವರು ಮುಖ್ಯ ಭಾಷಣ ಮಾಡಲಿದ್ದು, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ.ಯಾಕೂಬ್, ಜಿಲ್ಲಾ ಮದ್ರಸ ಮ್ಯಾನೇಜ್‍ಮೆಂಟ್ ಅಧ್ಯಕ್ಷ ಉಸ್ಮಾನ್ ಹಾಜಿ, ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ನೌಷಾದ್ ಫೈಝಿ, ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯ ಕಲೀಮುಲ್ಲಾ, ಮಾಜಿ ಸದಸ್ಯ ಅಬ್ದುಲ್ ಖಾದರ್, ಕುಶಾಲನಗರ ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಮಡಿಕೆÉೀರಿ ರೇಂಜ್ ಮ್ಯಾನೇಜ್‍ಮೆಂಟ್ ಕಾರ್ಯದರ್ಶಿ ಡಿ.ಎ. ಸುಲೈಮಾನ್ ಕೊಡ್ಲಿಪೇಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಶ್ರಫ್ ಮಿಸ್ಬಾಹಿ ವಿವರಿಸಿದರು.

ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾ ಉಪಾಧ್ಯಕ್ಷ ತಮ್ಲಿಕ್ ದಾರಿಮಿ ಅವರು ಮಾತನಾಡಿ, ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮಿತಿಯು ಜಿಲ್ಲೆಯ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಪ್ರಗತಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಜಿಲ್ಲೆಯ ವಿವಿಧ ರೀತಿಯ ಪ್ರಗತಿಯಲ್ಲೂ  ಮುಂಚೂಣಿಯಲ್ಲಿದೆ. ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಅಯ್ಯಂಗೇರಿಯ ವ್ಯಕ್ತಿಯೊಬ್ಬರಿಗೆ ಎಸ್‍ಕೆಎಸ್‍ಎಸ್‍ಎಫ್ ಮತ್ತು ಅದರ ಅಧೀನ ಸಂಘಟನೆಗಳು ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದು, ಪ್ರಕೃತಿ ವಿಕೋಪದ ಸಂದರ್ಭ ಪುತ್ತೂರು ಮತ್ತು ಸುಳ್ಯದ ಕಾರ್ಯಕರ್ತರು ಜೋಡುಪಾಲದ ಸುಮಾರು 300 ಕ್ಕೂ ಅಧಿಕ ಕುಟುಂಬಗಳಿಗೆ ಆಸರೆ ಕಲ್ಪಿಸಿದ್ದಾರೆ.

ಅದರಲ್ಲೂ ಪುತ್ತೂರಿನ 19ರ ಪ್ರಾಯದ ಫಯಾಜ್ ಎಂಬವರು ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿರುವುದನ್ನು ಸಂಸ್ಥೆ ಸ್ಮರಿಸುತ್ತದೆ ಎಂದು ತಿಳಿಸಿದರು.

ಸಂಸ್ಥೆಯು ಪ್ರಸಕ್ತ ವಿವಿಧ ಧರ್ಮಗಳ ಆರ್ಥಿಕವಾಗಿ ಹಿಂದುಳಿದ ಏಳು ಕುಟುಂಬಗಳನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಲು ಪ್ರಥಮ ಹಂತದಲ್ಲಿ ತಲಾ 50 ಸಾವಿರ ರೂ.ಗಳನ್ನು ಒದಗಿಸುತ್ತಿದೆ ಎಂದು ತಮ್ಲಿಕ್ ದಾರಿಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ಕೆಎಸ್‍ಎಸ್‍ಎಫ್ ಕೇಂದ್ರ ಸಮಿತಿ ಸದಸ್ಯ ಉಮ್ಮರ್ ಫೈಝಿ, ರಾಜ್ಯ ಕಾರ್ಯದರ್ಶಿ ಆರೀಫ್ ಫೈಝಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಮಜೀದ್ ಕುಶಾಲನಗರ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: