ಮೈಸೂರು

ಜುಲೈ 27 : ವಂದೇಮಾತರಂ ಈ ಭೂಮಿ ನಮ್ಮ ಮನೆ ವಿಶೇಷ ಭರತ ನಾಟ್ಯ ಕಾರ್ಯಕ್ರಮ

ಮೈಸೂರು,ಜು.22:- ಗಾನಭಾರತಿಯಲ್ಲಿ ಜುಲೈ 27ರ ಶನಿವಾರ ಸಂಜೆ 6 ಗಂಟೆಗೆ ‘ವಂದೇ ಮಾತರಂ – ಈ ಭೂಮಿ ನಮ್ಮ ಮನೆ’ ಎಂಬ ವಿಶೇಷ ಭರತನಾಟ್ಯ ಪ್ರಯೋಗವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನೃತ್ಯ ಸಂಯೋಜನೆಯನ್ನು ರಮ್ಯಾಎಸ್ ಕಪಾಡಿಯ ಮಾಡಿದ್ದಾರೆ. ನೃತ್ಯದಲ್ಲಿ ವಿದುಷಿ ರಮ್ಯಾ ಕಪಾಡಿಯ ಹಾಗೂ ಸೀಮಾ ವಿಶ್ವನಾಥ್‍ ಅವರು ಭಾಗವಹಿಸಲಿದ್ದಾರೆ. ಸಂಗೀತ ಸಂಯೋಜನೆ ಹಾಗೂ ಧ್ವನಿ ವಿನ್ಯಾಸವನ್ನು ರಾಜೀವ್ ಸುಂದರೇಶನ್, ದೀಮ್‍ ಕಲ್ಪನೆ ಎಂಬಾರ್‍ ಕಣ್ಣನ್‍ ಅವರದ್ದು ಹಾಗೂ ಘರ್‍ ಕಲ್ಪನೆ ಆದಿತ್ಯ ಶರ್ಮ ಅವರದ್ದು. ಇಂದಿನ ಪರಿಸ್ಥಿತಿಯನ್ನು ಕೇಂದ್ರವಾಗಿಟ್ಟುಕೊಂಡು ಇದನ್ನು ಯೋಜಿಸಲಾಗಿದೆ.

ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ, ನಮ್ಮ ಮೌಲ್ಯಗಳನ್ನು, ಆದರ್ಶಗಳನ್ನು ಪ್ರಶ್ನಿಸಿಕೊಳ್ಳಬೇಕಾದ ಅವಶ್ಯಕತೆ ಇಂದು ತುಂಬಾ ಇದೆ. ನಮ್ಮ ನಿಜವಾದ ಸ್ವಭಾವದೊಡನೆ ಮುಖಾಮುಖಿ ಆಗಲು, ನಮಗಿಂತ ಭಿನ್ನವಾದ ಯೋಚನೆಗಳನ್ನು, ಕಲ್ಪನೆಗಳನ್ನು, ಜನರನ್ನು ಒಪ್ಪಿಕೊಳ್ಳಲು ನಮಗಿರುವ ಸಮಸ್ಯೆಗಳನ್ನು ಇದು ಭರತನಾಟ್ಯದ ಮಾಧ್ಯಮದ ಮೂಲಕ ಎದುರಿಸುತ್ತದೆ. ಹಾಗೆಯೇ ಇತ್ತೀಚೆಗೆ ಜಗತ್ತಿನಲ್ಲಿ ಎಲ್ಲಾ ಕಡೆ ನಡೆಯುತ್ತಿರುವ ಯುದ್ಧ, ಕಲಹ, ದಾಳಿಗಳ ಹಿನ್ನಲೆಯಲ್ಲಿ ವಾತ್ಸಲ್ಯ, ಕರುಣೆಯಿಂದ ಪ್ರತಿಯೊಬ್ಬ ಮಾನವನ ಜೊತೆಗೂ ಒಂದಾಗಿ ನಿಲ್ಲಬೇಕಾದ ಅವಶ್ಯಕತೆಯನ್ನು ಇದು ನಮಗೆ ನೆನಪು ಮಾಡಿಕೊಡುತ್ತದೆ. ನಾವೆಲ್ಲರೂ ಮೊದಲಿಗೆ ಈ ಭೂಮಿಯ ಮಕ್ಕಳು. ಹಾಗಾಗಿ ನಾವು ಜನಾಂಗ, ಲಿಂಗ, ಬಣ್ಣ, ಭಾಷೆ ಇತ್ಯಾದಿಗಳನ್ನು ಮೀರಿಕೊಂಡು ಪರಸ್ಪರ ಪ್ರೀತಿಸಲು ಪಣತೊಡೋಣ. ನಮ್ಮ ಹೃದಯ ಎಲ್ಲಿದೆಯೋ ಅದೇ ನಿಜವಾಗಿ ನಮ್ಮ ಮನೆ. ಸ್ಥೂಲವಾಗಿ ಇಂತಹ ಆದರ್ಶವನ್ನು ಇಟ್ಟುಕೊಂಡು ವಂದೇ ಮಾತರಂ- ಪ್ರದರ್ಶನ ರೂಪುಗೊಂಡಿದೆ. ನೃತ್ಯದ ಮೂಲಕ ಈ ಭಾವನೆಗಳಿಗೆ ಧ್ವನಿ ಕೊಡುವ ಪ್ರಯತ್ನವನ್ನು ಕಲಾವಿದರು ಮಾಡಿದ್ದಾರೆ. ಹಲವು ಶ್ರೇಷ್ಠ ಕಲಾವಿದರ, ಕ್ರಿಯಾಶೀಲ ಮನಸ್ಸುಗಳ ಪ್ರಯತ್ನದಿಂದ ಈ ಕಲಾಕೃತಿ ರೂಪುಗೊಂಡಿದೆ. ಸದ್ಯ ಅಮೇರಿಕೆಯಲ್ಲಿ ನೆಲಸಿರುವ ರಮ್ಯಾ ಕಪಾಡಿಯ ವಿದ್ವಾನ್ ವಾಮನನ್ ಬಳಿ ಕಲಿತಿದ್ದಾರೆ. ಗಾಯನದಲ್ಲೂ ಪರಿಣತಿಯನ್ನು ಪಡೆದಿದ್ದಾರೆ. ಸೀಮಾ ವಿಶ್ವನಾಥ್‍ ಅವರು ವಿದುಷಿ ನಂದಿನಿ ಈಶ್ವರ್‍ಅವರ ಶಿಷ್ಯೆ. ಇಬ್ಬರೂ ತಮ್ಮದೇ ಶಾಲೆಗಳನ್ನು ಸ್ಥಾಪಿಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. (ಎಸ್.ಎಚ್)

Leave a Reply

comments

Related Articles

error: