ಮೈಸೂರು

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಫೆ.17 ರಿಂದ 19ರ ವರೆಗೆ

ಮೈಸೂರು ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 17 ರಿಂದ 19ರ ವರೆಗೆ ಕೃಷ್ಣರಾಜನಗರದ ಡಾ.ರಾಜ್‍ಕುಮಾರ್ ಬಾನಂಗಳ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕಸಪಾ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೆಸರಾಂತ ವಿದ್ವಾಂಸ ಕೆ.ಅನಂತ್‍ರಾಮು ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಮೂರು ದಿನಗಳ ಕಾಲ ಜರುಗುವ ಸಮ್ಮೇಳನಕ್ಕೆ ಶಾಸಕ ಸಾ.ರಾ. ಮಹೇಶ್ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದಾರೆ. ಸಿ ತೋಟೇಗೌಡ್ರ “ರಾಮಾಯಣ” ಪುಸ್ತಕವನ್ನು ಸಂಸದ ಸಿ.ಎಸ್.ಪುಟ್ಟರಾಜು ಬಿಡುಗಡೆಗೊಳಿಸುವರು. ಜಿ.ಪಂ.ಅಧ್ಯಕ್ಷ ನಯಿಮಾ ಸುಲ್ತಾನ ನಜೀರ್ ಅಹಮ್ಮದ್ ಅವರು ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ಮಾಡುವರು. ಮಾಜಿ ಸಂಸದ ಹೆಚ್. ವಿಶ್ವನಾಥ್ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು ಎಂದು ತಿಳಿಸಿದರು.

ಸಮ್ಮೇಳನದಲ್ಲಿ ವರ್ತಮಾನ ಕನ್ನಡದ ಆತಂಕಗಳು ಹಾಗೂ ಪ್ರಗತಿಪರ ರೈತ ಪುಟ್ಟಯ್ಯ ಅವರ ನೇತೃತ್ವದಲ್ಲಿ ಬರ, ಕೃಷಿ ನಿರ್ವಹಣೆ ಕುರಿತಾದ ಕೃಷಿಗೋಷ್ಠಿ ಸಂವಾದಗಳು ಜರುಗಲಿವೆ. ಚುಟುಕು ಕವಿಗೋಷ್ಠಿ, ವಿಚಾರಗೋಷ್ಠಿ, ವಿಶೇಷವಾಗಿ ಜಿಲ್ಲೆಯ ಜಾನಪದ, ರಂಗಭೂಮಿ, ಪ್ರವಾಸಿ ತಾಣಗಳು, ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಹಾಗೂ ಮೈಸೂರು ಅರಸರು ಕಲೆಗೆ ನೀಡಿದ ಪ್ರೋತ್ಸಾಹ, ದಲಿತ ಮತ್ತು ಮಕ್ಕಳ ಸಾಹಿತ್ಯ ಚಿಂತನೆಗಳ ವಿಚಾರಗೋಷ್ಠಿಗಳು ಜರುಗಲಿವೆ. ಸಮಕಾಲೀನ ವಿಚಾರವಾಗಿ ಕೆ.ಅನಂತರಾಮು ನೇತೃತ್ವದಲ್ಲಿ ಸಂವಾದ ಗೋಷ್ಠಿ, ಕೃಷಿ ಹಾಗೂ ಶಿಕ್ಷಣ ಸ್ಥಿತಿಗತಿಗಳು ಹಾಗೂ ಇತರೆ ಗೋಷ್ಠಿಗಳು ನಡೆಯಲಿವೆ. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಸಮಾರೋಪ ಭಾಷಣ ಮಾಡುವರು. ತೇ.ಸಿ.ವಿಶ್ವೇಶ್ವರಯ್ಯ ಅವರ ಸಂಪಾದಕತ್ವದ “ಕೃಷ್ಣರಾಜ ಸಿರಿ ಸ್ಮರಣ” ಸಂಚಿಕೆಯನ್ನು ಹೊರತರಲಾಗುವುದು ಎಂದು ತಿಳಿಸಿದರು.

ಕೃಷ್ಣರಾಜನಗರದ ತಾಲೂಕು ಕ.ಸಾ.ಪ. ಅಧ್ಯಕ್ಷ ಡಿಂಡಿಮ ಶಂಕರ್, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಕೋಶಾಧ್ಯಕ್ಷ ರಾಜಶೇಖರ ಕದಂಬ ಹಾಗೂ ಮೂಗೂರು ನಂಜುಂಡಸ್ವಾಮಿ ಹಾಜರಿದ್ದರು.

Leave a Reply

comments

Related Articles

error: