ಮೈಸೂರು

ಮುಸುಕುಧಾರಿಗಳಿಂದ ಮನೆ ಬಾಗಿಲು ಮುರಿದು ಹಲ್ಲೆ; ಬೆಲೆಬಾಳುವ ವಸ್ತುಗಳ ದರೋಡೆ

ಬೈಲಕುಪ್ಪೆ: ಮುಖಕ್ಕೆ ಮುಸುಕು ಹಾಕಿದ್ದ ಐವರು ದುಷ್ಕರ್ಮಿಗಳು ಮನೆಯ ಬಾಗಿಲು ಮುರಿದು, ಮಾರಕ ಅಸ್ತ್ರಗಳಿಂದ ಮನೆಯ ಸದಸ್ಯರನ್ನು ಗಾಯಗೊಳಿಸಿ ಚಿನ್ನಾಭರಣ ಮತ್ತು ಮೊಬೈಲ್ ಪೋನ್‌ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಮರೂರು ಗ್ರಾಮದ ನೀಲೇಗೌಡ ಎಂಬುವರ ಮಗ ಮಲ್ಲೇಶ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಸುಮಾರು 11.30 ಘಂಟೆಯಲ್ಲಿ ಮಲ್ಲೇಶ್ ಮತ್ತು ತನ್ನ ಪತ್ನಿ ಜಯಮ್ಮ ಇಬ್ಬರೂ ಮನೆಯಲ್ಲಿ ನಿದ್ರೆಯಲಿದ್ದರು ಎನ್ನಲಾಗಿದೆ.

ಮನೆಯ ಬಾಗಿಲು ಶಬ್ದ ಮಾಡಿ ಸಂಬಂಧಿಕರು ಎಂದು ಹೇಳಿ ಬಾಗಿಲು ತೆಗೆಯುವಂತೆ ತಿಳಿಸಿದ್ದಾರೆ. ಇದರಿಂದ ಜಾಗೃತರಾದ ದಂಪತಿಗಳು ಬಾಗಿಲು ಬಳಿ ಇರುವ ಕಿಟಕಿಯಲ್ಲಿ ಬೆಳಕು ಹಾಕಿ ನೋಡಿದಾಗ ಮುಸುಕು ಧರಿಸಿದ್ದಾರೆ ಎಂಬುವುದು ದೃಢವಾದ ಕಾರಣ ಬಾಗಿಲು ತೆಗೆಯಲಿಲ್ಲ.

ಆಗ ಬಾಗಿಲು ಒಡೆದು ಮನೆಗೆ ನೂಗ್ಗಿದ ಮುಸುಕುಧಾರಿಗಳಾದ ಐವರು ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಇಬ್ಬರಿಗೂ ಪ್ರಾಣ ಬೆದರಿಕೆ ಹಾಕಿ, ಜಯಮ್ಮ ಧರಿಸಿದ್ದ ಕರಿಮಣಿ ಸರದ ೮ ಗುಂಡು, 2 ಕಾಸು, ತಾಳಿ, 1 ಜೊತೆ ಓಲೆ ಸೇರಿದಂತೆ ಒಟ್ಟು 10 ಗ್ರಾಂ ಚಿನ್ನ ಹಾಗೂ 2 ನೋಕಿಯಾ ಮೊಬೈಲ್ ಫೋನ್ ಸೇರಿ ಒಟ್ಟು 27,500 ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಗಾಯಗೊಂಡ ಮಲ್ಲೇಶ್ ಮತ್ತು ಜಯಮ್ಮ ಕುಶಾಲನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೈಲಕುಪ್ಪೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಸಬ್‌ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಅವರು ಕಳ್ಳರ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

ಹುಣಸೂರು ಉಪವಿಭಾಗದ ಡಿವೈಎಸ್‌ಪಿ ಹರೀಶ್ ಪಾಂಡೆ, ವೃತ್ತ ನಿರೀಕ್ಷಕರಾದ ಸಿದ್ದಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಎಎಸ್‌ಐ ಶ್ರೀನಿವಾಸಲು, ಎನ್.ಟಿ.ಮಹದೇವ್, ಕೃಷ್ಣ, ರಾಜಣ್ಣ ಹಾಗೂ ರವಿ ಅವರು ಪಾಲ್ಗೊಂಡಿದ್ದರು.

Leave a Reply

comments

Related Articles

error: