ಮೈಸೂರು

ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಹಬ್ಬದ ಸಡಗರಕ್ಕೆ ವಸ್ತ್ರಗಳ ಮೆರುಗು : ಜು.26 ರಂದು ಉದ್ಘಾಟನೆ

ಮೈಸೂರು,ಜು.24:- ಆಗಸ್ಟ್ ತಿಂಗಳು ಬಂದಿದೆ. ಇನ್ನೇನು ಹಬ್ಬಗಳೂ ಸಾಲು ಸಾಲಾಗಿ ನಮ್ಮ ಮುಂದೆ ಬಂದು ನಿಂತಿವೆ, ಮೈಸೂರಿನ ಹೆಬ್ಬಾಳ ರಿಂಗ್‍ರಸ್ತೆಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ ನಲ್ಲಿ   ಜುಲೈ 26 ರಿಂದ ಆಗಸ್ಟ್ 4ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯುವ ಈ ವಸ್ತ್ರ ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳ ನೇಕಾರರು/ಸಂಘ ಸಂಸ್ಥೆಗಳು/ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮೈಸೂರಿನ ಹಾಗು ಸುತ್ತ ಮುತ್ತಲಿನ ಗ್ರಾಹಕರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಮಾರಾಟ ಮಾಡಲಿದ್ದಾರೆ.

ವಿವಿಧ ರೀತಿಯ ಉಡುಪುಗಳು, ಸೀರೆಗಳ ಮೇಲೂ ಕಲಾವಿದರು ತಮ್ಮ ಕೈಚಳಕ ಮೂಡಿಸಿದ್ದಾರೆ. ವಸ್ತ್ರಗಳ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಾರೆ.

ಪಶ್ಚಿಮ ಬಂಗಾಳದ ಸೆಣಬಿನ ಉತ್ಪನ್ನಗಳು ಉತ್ಸವದಲ್ಲಿ ಮನ ಸೆಳೆಯುತ್ತಿವೆ. ಆಕರ್ಷಕ, ಪ್ರಾಕೃತಿಕ ಬಣ್ಣಗಳನ್ನು ಉಪಯೋಗಿಸಿ ತಯಾರಿಸಿರುವ ಈ ಉತ್ಪನ್ನಗಳು ಆಕರ್ಷಕವಾಗಿದ್ದು, ಬಳಕೆದಾರ ಸ್ನೇಹಿಯಾಗಿವೆ. ಸೆಣಬಿನ ಚೀಲಗಳು, ಪರ್ಸ್‍ಗಳು, ಪೌಚ್‍ಗಳು, ಟಿಫಿನ್‍ ಬ್ಯಾಗ್‍ ಗಳು ಕೂಡ ಇವೆ.

ವರಮಹಾಲಕ್ಷ್ಮಿ ಹಬ್ಬದಲ್ಲಿ ಬಗೆ ಬಗೆ ದಿರಿಸುಗಳಿಂದ ಲಕ್ಷ್ಮಿಯರು ಕಂಗೊಳಿಸಬೇಕು ಎಂಬ ಉದ್ದೇಶದಿಂದ ಜೆಎಸ್‍ಎಸ್ ಅರ್ಬನ್ ಹಾತ್ ಆಯೋಜಿಸಿರುವ ವಸ್ತ್ರ ಉತ್ಸವವು ಸೀರೆಪ್ರಿಯ ನಾರಿಯರಿಗೆ ಹೇಳಿಮಾಡಿಸಿದ ಕಾರ್ಯಕ್ರಮವಾಗಿದೆ.

ಹಬ್ಬ ಆಚರಿಸುವ ಎಲ್ಲ ಮಹಿಳೆಯರಿಗೂ ಸೀರೆ ಅನಿವಾರ್ಯವೂ ಹೌದು. ಅಗತ್ಯವೂ ಹೌದು. ನಮಗೆ ಬೇಕಾದ ಸೀರೆಗಳನ್ನು ಹುಡುಕಿಕೊಂಡು ಹೋಗುವಷ್ಟು ಸಮಯವೂ ಇರುವುದಿಲ್ಲ. ಅಂಥ ಅನಿವಾರ್ಯತೆಯನ್ನು ಮನಗಂಡು ಈ ಉತ್ಸವದಲ್ಲಿ ಸೀರೆಗಳ ಗಢಣವೇ ಇದೆ. ಮನಸ್ಸಿಗೆ ಒಪ್ಪುವ, ದೇಹಕ್ಕೆ ಒಗ್ಗುವ, ಜೇಬಿಗೆ ಭಾರವಾಗದ, ಅಂತಸ್ತಿಗೆ ತಕ್ಕುದಾದ ಸೀರೆಗಳು ಈ ಮೇಳದಲ್ಲಿ ಇವೆ. ಹಬ್ಬಕ್ಕೆ ರೇಷ್ಮೆ ಸೀರೆಯನ್ನೇ ಈ ಬಾರಿ ಉಡಬೇಕು ಎಂದು ಹಂಬಲಿಸಿದ್ದವರಿಗೂ ವಸ್ತ್ರ ಉತ್ಸವ ನಿರಾಶೆ ಮಾಡುವುದಿಲ್ಲ. ಈ ಬಾರಿ ಇಳಕಲ್ ಸೀರೆ ಖರೀದಿಸಬೇಕು ಎಂದು ನಿಶ್ಚಯಿಸಿದ್ದವರಿಗೆ, ಮೊಳಕಾಲ್ಮೂರು ಸೀರೆ ಧರಿಸಬೇಕು ಎಂದು ಮನಸ್ಸು ಮಾಡಿದವರ ಆಸೆ ಪೂರೈಸಲೂ ಈ ಬಾರಿಯ ವಸ್ತ್ರ ಉತ್ಸವದಲ್ಲಿ ಅವಕಾಶವಿದೆ. ಗುಜರಾತ್‍ನ ವಿಶಿಷ್ಟ ಬಗೆಯ ಕಲಾತ್ಮಕ ವಸ್ತ್ರಗಳ ಮಳಿಗೆಯೂ ಈ ಬಾರಿ ಉತ್ಸವದಲ್ಲಿವೆ. ಸ್ಕರ್ಟ್‍ಗಳು, ದುಪಟ್ಟಾ, ಸಲ್ವಾರ್‍ಗಳು, ಸಮ್ಮರ್, ವಿಂಟರ್ ಮಾಸ್ಕ್‍ಗಳು ಇವೆ. ಮುಳಬಾಗಿಲಿನ ವೈಷ್ಣವಿ ಸಿಲ್ಕ್ ಸೀರೆಗಳು, ಕುರ್ತಾಗಳು, ಡ್ರೆಸ್ ಮೆಟೀರಿಲ್‍ಗಳ ಸಂಗ್ರಹವೇ ಇದೆ. ಕೈ ಮಗ್ಗದ ಉಡುಪುಗಳು, ಪರಿಶುದ್ಧ ರೇಷ್ಮೆ ಸೀರೆಗಳು ಕೂಡ ಇವೆ.

ಜಾರ್ಖಂಡ್‍ನ ತಸ್ಸರ್ ರೇಷ್ಮೆ ಸೀರೆಗಳು, ಮಧುಬನಿ ಸೀರೆಗಳು, ಡ್ರೆಸ್ ಮೆಟೀರಿಯಲ್‍ಗಳು ದುಪಟ್ಟಾ, ಆರ್ಗಾನಿಕ್ ತಸ್ಸರ್ ಸಿಲ್ಕ್ ಸೀರೆಗಳೂ, ಲಿನೆನ್ ಸೀರೆಗಳು ಸಪ್ನಾ ಸಿಲ್ಕ್ಸ್ ಮಳಿಗೆಗಳಲ್ಲಿ ಸಿಗುತ್ತಿವೆ. ಪಶ್ಚಿಮ ಬಂಗಾಳದ ಸಿಲ್ಕ್ ಸೀರೆಗಳು, ಮಧ್ಯಪ್ರದೇಶದ ಮಹೇಶ್ವರಿ ಕಾಟನ್, ಸಿಲ್ಕ್ ಸೀರೆಗಳು ಚಂದೇರಿ ಸೀರೆಗಳು, ಕುಮುದಾ ಫ್ಯಾಷನ್ಸ್‍ನಲ್ಲಿ ಕುರ್ತಾ, ಸೀರೆ, ಶರ್ಟ್‍ಗಳು ಇವೆ.

ವರಮಹಾಲಕ್ಷ್ಮಿ ಹಬ್ಬಕ್ಕಾಗಿಯೇ ವಿನ್ಯಾಸಗೊಳಿಸುವಂಥ ಕಾಶ್ಮೀರಿ ಪ್ರಿಂಟೆಡ್ ಸಿಲ್ಕ್ ಸೀರೆಗಳು ಇವೆ. ಹೌಸ್ ಆಫ್ ಸಿಯೋನ ಮಳಿಗೆಯಲ್ಲಿ ಆಭರಣಗಳು, ಸೀರೆಗಳ ಬೃಹತ್ ಸಂಗ್ರಹ ಇದೆ. ಆಂಧ್ರಪ್ರದೇಶದ ಪ್ರಸಿದ್ಧ ಕಲಮ್‍ಕಾರಿ ಸೀರೆಗಳು, ಹತ್ತಿಯ ಆಕರ್ಷಕ ಸೀರೆಗಳು ಗ್ರಾಹಕರ ನಿರೀಕ್ಷೆಯಲ್ಲಿವೆ. ಪಶ್ಚಿಮ ಬಂಗಾಳದ ಕಲ್ಕತ್ತದ ವಿಶಿಷ್ಟ ಸೀರೆಗಳು, ಹತ್ತಿಯ ಸೀರೆಗಳು, ಫ್ಯಾಬ್ರಿಕ್‍ಗಳು, ಕುರ್ತಾಗಳು ಇವೆ. ಎಂಬ್ರಾಯ್ಡರಿ ಮಾಡಿರುವ, ಕಸೂತಿ ಮಾಡಿರುವ ವಸ್ತ್ರಗಳು, ಬನಾರಸ್ ಸೀರೆಗಳು ಪ್ರಮುಖ ಆಕರ್ಷಣೆಗಳಾಗಿವೆ.

ಶ್ರೀರಂಗಪಟ್ಟಣ ಕೊಡಿಯಾಲದ ಪದ್ಮಶಾಲಿ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಂಘದವರು ತಯಾರಿಸಿರುವ ಉಡುಪುಗಳೂ ಮಾರಾಟಗೊಳ್ಳುತ್ತಿವೆ. ಕಾಂಚಿ ಸೀರೆಗಳು, ಸಾಫ್ಟ್ ಸಿಲ್ಕ್, ಸಿಲ್ಕ್ ಸೀರೆಗಳು ಇವೆ. ಸಿಲ್ಕ್ ಮಾರ್ಕ್ ಇರುವ ಸೀರೆಗಳು ಈ ಮಳಿಗೆಯ ವೈಶಿಷ್ಟ್ಯ. ಮಧ್ಯಪ್ರದೇಶದ ಬೊಟಿಕ್ ಪ್ರಿಂಟ್ ಸೀರೆಗಳು, ಕಾಟನ್ ಸೀರೆಗಳು, ಬೆಡ್ ಶೀಟ್‍ಗಳೂ ಲಭ್ಯ ಇವೆ.

ಪಶ್ಚಿಮ ಬಂಗಾಲದ ಕಾಂತಾ ಸೀರೆಗಳು, ಉತ್ತಮ ಗುಣಮಟ್ಟದ ಎಂಬ್ರಾಯ್ಡರಿ ಮಾಡಿದ ವಸ್ತ್ರಗಳು, ರೇಷ್ಮೆ, ಕಾಟನ್, ಕಸೂತಿ ಮಾಡಿದ ಸೀರೆಗಳೂ ಲಭ್ಯ ಇವೆ. ಹುಬ್ಬಳ್ಳಿಯ ಕಾಟನ್ ಸೀರೆಗಳು, ಲೈಟ್‍ವೇಟ್ ಸೀರೆಗಳು, ಕಾಂಚಿ ಸೀರೆಗಳು, ಇಳಕಲ್ ಸೀರೆಗಳು ಸಿಗುತ್ತವೆ.

26.07.2019ರ ಶುಕ್ರವಾರದಂದು ಸಂಜೆ 4  ಘಂಟೆಗೆ ಈ ಉತ್ಸವದ ಉದ್ಘಾಟನೆಯನ್ನು   ಅಪರ್ಣ ಗರ್ಗ್  ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮೈಸೂರು ವಿಭಾಗ ಮೈಸೂರು ಇವರು ನೆರವೇರಿಸಲಿದ್ದು, ಡಾ.ಸಿ.ಜಿ.ಬೆಟಸೂರಮಠ, ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ಜೆಎಸ್‍ಎಸ್ ಮಹಾವಿದ್ಯಾಪೀಠ ಇವರು ಅಧ್ಯಕ್ಷತೆ ವಹಿಸಲಿದ್ದಾರೆ, ಡಾ. ಸಿ. ರಂಗನಾಥಯ್ಯ, ನಿರ್ದೇಶಕರು (ತಾಂತ್ರಿಕ), ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗ,   ಬಿ.ಆರ್.ಉಮಾಕಾಂತ್, ಜಂಟಿ ನಿರ್ದೇಶಕರು (ಯೋಜನೆಗಳು), ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗ ಮತ್ತು   ಕೆ.ಸುನಿಲ್ ಕುಮಾರ್, ಸಹಾಯಕ ನಿರ್ದೇಶಕರು, ಕರಕುಶಲ ಮಾರುಕಟ್ಟೆ ಹಾಗೂ ಸೇವಾ ವಿಸ್ತರಣಾಕೇಂದ್ರ,ಜವಳಿ ಮಂತ್ರಾಲಯ-ಕರಕುಶಲ,ಭಾರತ ಸರ್ಕಾರ,ಮೈಸೂರು  ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: