ಪ್ರಮುಖ ಸುದ್ದಿ

ಜುಲೈ 31ರೊಳಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರದಿದ್ದರೆ ಹೊಸ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ, ಸರ್ಕಾರಿ ನೌಕರರಿಗೆ ವೇತನ ನೀಡಲು ಅಸಾಧ್ಯ : ಸ್ಪೀಕರ್ ರಮೇಶ್ ಕುಮಾರ್ ಆತಂಕ

ರಾಜ್ಯ(ಬೆಂಗಳೂರು)ಜು.25:-  ರಾಜ್ಯದಲ್ಲಿ ಹೊಸ ಸರ್ಕಾರ ಈ ತಿಂಗಳ 31ರೊಳಗೆ ಅಸ್ತಿತ್ವಕ್ಕೆ ಬರದಿದ್ದರೆ ಹೊಸ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ಸ್ಪೀಕರ್ ರಮೇಶ್ ಕುಮಾರ್  ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುವುದು ಕೂಡ ಅನಿವಾರ್ಯವಾಗಬಹುದು. ಹಣಕಾಸು ವಿಧೇಯಕ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಬೇಕಿತ್ತು. ಆದರೆ ಸದನದಲ್ಲಿ ಅತೃಪ್ತ ಶಾಸಕರ ಅನುಪಸ್ಥಿತಿಯಿದ್ದ ನಂತರ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡ ಕಾರಣ ಹಣಕಾಸು ವಿಧೇಯಕ ಮಂಡನೆಗೆ ವಿಪಕ್ಷ ಬಿಜೆಪಿ ಅವಕಾಶ ನೀಡಲಿಲ್ಲ.  ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದು ಅದರಲ್ಲಿ ಹೆಚ್ ಡಿ ಕುಮಾರಸ್ವಾಮಿಯವರು ವಿಫಲವಾಗಿ ಸರ್ಕಾರ ಬಿದ್ದುಹೋಯಿತು.  ಹಣಕಾಸು ವಿಧೇಯಕ ಜುಲೈ 31ರೊಳಗೆ ಅನುಮೋದನೆಯಾಗದೆ ಹೋದರೆ ಸರ್ಕಾರದ ಖಜಾನೆಯಿಂದ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ.  ಆಗ ಸರ್ಕಾರದ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವುದಿರಲಿ, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಹ ಸರ್ಕಾರದ ಬಳಿ ಹಣ ಇಲ್ಲದಂತಾಗುತ್ತದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಸ್ಪೀಕರ್ ವಾಸ್ತವತೆಯನ್ನು ತೆರೆದಿರಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್​ನ ಕೆಲ ನಾಯಕರು ತಮ್ಮ ಬಳಿ ನಿನ್ನೆ ಮಾತನಾಡಿದ್ದಾರೆ. ಬಿಜೆಪಿಯವರು ಯಾವಾಗ ಸರ್ಕಾರ ರಚನೆ ಮಾಡುತ್ತಾರೋ ಅವರಿಗೆ ಬಿಟ್ಟಿದ್ದು. ಜುಲೈ 31ರೊಳಗೆ ಸರ್ಕಾರ ರಚನೆಯಾಗಿ ಹಣಕಾಸು ವಿಧೇಯಕ ಮಂಡನೆಯಾಗಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅದು ಅಂಗೀಕಾರವಾಗಬೇಕು. ಬಿಜೆಪಿಯವರು ಏನು ಮಾಡುತ್ತಾರೋ ಆ ದೇವರಿಗೇ ಗೊತ್ತು ಎಂದು ಸ್ಪೀಕರ್ ಹೇಳಿದರು.

ಶಾಸಕರ ರಾಜೀನಾಮೆ ವಿಚಾರದಲ್ಲಿ ವಿಳಂಬ ಮಾಡುತ್ತಿರುವುದರಿಂದಲೇ ನೂತನ ಸರ್ಕಾರ ರಚನೆಗೆ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು  ರಾಜೀನಾಮೆ ನೀಡಿದ ಶಾಸಕರನ್ನು ನಿಯಮ  ಪ್ರಕಾರವೇ ವಿಚಾರಣೆಗೆ ಕರೆದಿದ್ದೆ. ಅವರು ಬಂದಿಲ್ಲ. ಪದೇ ಪದೇ ನೋಟೀಸ್ ಕೊಡುತ್ತಾ ಕೂರಲು ನನಗೇನು ಬೇರೆ ಕೆಲಸ ಇಲ್ಲವೇ, ಈ ದೇಶದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಇರೋದಿಲ್ಲ, ಕೂಲಿ ಮಾಡುವವನಿಗೂ, ಶ್ರೀಮಂತನಿಗೂ ಒಂದೇ ಕಾನೂನು ನೆನಪಿಟ್ಟುಕೊಳ್ಳಿ ಎಂದಿದ್ದಾರೆ. (ಕೆ.ಎಸ್,ಎಸ್ಎಚ್)

Leave a Reply

comments

Related Articles

error: