ದೇಶಪ್ರಮುಖ ಸುದ್ದಿ

ಒಂದೇ ಸಲ 104 ಉಪಗ್ರಹಗಳ ಉಡಾವಣೆ ಯಶಸ್ವಿ: ವಿಶ್ವ ದಾಖಲೆ ನಿರ್ಮಿಸಿದ ಇಸ್ರೊ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಒಂದೇ ಸಲ 104 ಉಪಗ್ರಹಗಳನ್ನು ಇಂದು (ಫೆ. 15) ಉಡಾವಣೆ ಮಾಡುವ ಮೂಲಕ ವಿಶ್ವದಾಖಲೆ ಬರೆದಿದೆ.

‘ಪಿಎಸ್‍ಎಲ್‍ವಿಸಿ-37’ ಉಡಾವಣಾ ವಾಹನದ ಮೂಲಕ 104 ಉಪಗ್ರಹಗಳನ್ನು ಆಂಧ್ರಪ್ರದೇಶದ ಕಡಲ ತೀರದಲ್ಲಿರುವ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ ಸುಮಾರು 9.28ರ ವೇಳೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 3 ದೇಶೀಯ ಉಪಗ್ರಹ ಮತ್ತು 101 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು.

‘ಕಾರ್ಟೊಸ್ಯಾಟ್-2’ ಭೂವೀಕ್ಷಣಾ ಕಾರ್ಯ ನಡೆಸುವ ಉಪಗ್ರಹವಾಗಿದ್ದು, ಇದರೊಂದಿಗೆ ಅಮೆರಿಕ, ಜರ್ಮನಿ, ಇಸ್ರೋಲ್‌, ಯುಎಇ, ನೆದರ್‌ಲ್ಯಾಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣಿಜ್ಯ ಉದ್ದೇಶಿತ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. 104 ಉಪಗ್ರಹಗಳ ಪೈಕಿ ಭೂವೀಕ್ಷಣಾ ಕಾರ್ಯ ನಡೆಸುವ ಅಮೆರಿಕ ಸಂಸ್ಥೆಯ 88 ಚಿಕ್ಕ ಉಪಗ್ರಹಗಳು ಕಕ್ಷೆ ಸೇರಿವೆ. ಇದಲ್ಲದೆ ಭಾರತದ ಕಾರ್ಟೋಸ್ಯಾಟ್–2, ಐಎನ್‌ಎಸ್‌-1ಎ ಹಾಗೂ ಐಎನ್‌ಎಸ್‌–1ಬಿ  ಸೇರಿದಂತೆ ಭಾರತದ ಮೂರು ಉಪಗ್ರಹಗಳು ಉಡಾವಣೆಯಾಗಿವೆ. ಪಿಎಸ್‌ಎಲ್‌ವಿ–ಸಿ37 ಉಡಾವಣಾ ವಾಹಕ ಒಟ್ಟು 1500 ಕೆ.ಜಿ. ತೂಕದ 104 ಉಪಗ್ರಹಗಳನ್ನು ಯಶಸ್ವಿಯಾಗಿ ಹೊತ್ತೊಯ್ಯುವ ಮೂಲಕ ಇಸ್ರೋ ಹೊಸ ದಾಖಲೆ ಬರೆದಿದೆ.

ರಷ್ಯಾ ದಾಖಲೆ ಮುರಿದ ಇಸ್ರೊ: ಪಿ.ಎಸ್.ಎಲ್.ವಿ-37 ಮೂಲಕ 104 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡುವ ಮೂಲಕ ಭಾರತ ಅತಿಹೆಚ್ಚು ಉಪಗ್ರಹಗಳನ್ನು ಒಂದೇ ಸಲಕ್ಕೆ ಉಡಾವಣೆ ಮಾಡಿದ ಮೊದಲ ದೇಶ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ 2014ರ ಜೂನ್‍ನಲ್ಲಿ ರಷ್ಯಾದ ಡ್ನೆಪ್ರ್ ರಾಕೆಟ್ 37 ಉಪಗ್ರಹಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ಈ ವರೆಗಿನ ಗರಿಷ್ಠ ದಾಖಲೆಯಾಗಿತ್ತು. ಬಳಿಕ ನಾಸಾ ಕೂಡ 29 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು. ಇದೀಗ ಭಾರತ 104 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡುವ ಮೂಲಕ ಅತಿಹೆಚ್ಚು ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿದ ಕೀರ್ತಿಗೆ ಸಂಪಾದಿಸಿದೆ.

ಯಶಸ್ವಿಯಾಗಿ ಕಕ್ಷೆಗೆ ಸೇರಿದ 104 ಉಪಗ್ರಹಗಳು: ಬೆಳಗ್ಗೆ ಸುಮಾರು 9.28ರ ವೇಳೆಗೆ ನಭಕ್ಕೆ ಹಾರಿದ ಪಿಎಸ್‌ಎಲ್‌ವಿಸಿ 37 ರಾಕೆಟ್, ಅರ್ಧ ಗಂಟೆ ಬಳಿಕ ಅಂದರೆ ಸುಮಾರು 10 ಗಂಟೆ ವೇಳೆಗೆ ಎಲ್ಲ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 2018 ರಲ್ಲಿ ಚಂದ್ರಯಾನ–2 ಮತ್ತು ಸೂರ್ಯನನ್ನು ಅಧ್ಯಯನ ಮಾಡಲು 2019ರಲ್ಲಿ ಆದಿತ್ಯಾ–ಎಲ್‌1 ಉಪಗ್ರಹಗಳ ಉಡಾವಣೆ ಇಸ್ರೊದ ಮುಂದಿನ ಯೋಜನೆಗಳು ಎಂದು ಇಸ್ರೊ ತಿಳಿಸಿದೆ.

Leave a Reply

comments

Related Articles

error: