ಮೈಸೂರು

ಎಸ್‌ಸಿಪಿ ಯೋಜನೆಯ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತಾ.ಪಂ ಸಭೆಯಲ್ಲಿ ಆಗ್ರಹ

ಮೈಸೂರು,ಜು.26:-  ಎಸ್‌ಸಿಪಿ ಯೋಜನೆಯ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಆ ಬಗ್ಗೆ ಪ್ರಶ್ನಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ. ಅಂತಹ ಅಧಿಕಾರಿಗಳು ಮತ್ತು ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಾ.ಪಂ.ಸದಸ್ಯ ಶ್ರೀನಿವಾಸ್ ಪ್ರಸಾದ್ ಆಗ್ರಹಿಸಿದರು.

ಅವರು ಕೆ.ಆರ್.ನಗರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಿನ್ನೆ  ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಬ್ಯಾಂಕ್‌ನವರು ದಲಿತರಿಗೆ ಸಾಲ ಕೊಡಲು ಒಪ್ಪದೇ ಇರುವುದರಿಂದ ವಿಶೇಷ ಘಟಕ ಯೋಜನೆಗಳು ಪ್ರಗತಿಯಾಗುತ್ತಿಲ್ಲ. ಇದರಿಂದಾಗಿ ಬಡವರಿಗೆ ಮತ್ತು ಶೋಷಿತರಿಗೆ ಅನ್ಯಾಯವಾಗುತ್ತಿದ್ದು ಅಂತಹ ಬ್ಯಾಂಕ್ ಅಧಿಕಾರಿಗಳ ಮೇಲೆ ಎಸ್‌ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯನ್ವಯ ದೂರು ದಾಖಲಿಸಿ ಎಂದರು. ಯಾವುದೇ ಯೋಜನೆಯಡಿ ಸಾಲ ಮಂಜೂರಾದರು ಬ್ಯಾಂಕ್‌ನವರು ಫಲಾನುಭವಿಗಳನ್ನು ಸತಾಯಿಸುತ್ತಿದ್ದಾರೆ. ಇದರಿಂದಾಗಿ ಯೋಜನೆಯ ಸದುದ್ದೇಶ ಈಡೇರದೇ ಹಳ್ಳ ಹಿಡಿಯುವಂತಾಗಿದೆ ಎಂದರು.

ಸದಸ್ಯ ಚಂದ್ರಶೇಖರ್ ಮಾತನಾಡಿ, ಕೆಲವು ಪಂಚಾಯಿತಿಗಳ ಪಿಡಿಓಗಳು ತಮಗೆ ಸರಿ ಹೊಂದುವಂತಹ ಕೆಲವು ಸದಸ್ಯರ ಸಹಿ ಪಡೆದುಕೊಂಡು ತಮಗೆ ಹೇಗೆ ಬೇಕೋ ಹಾಗೆ ಬರೆದುಕೊಂಡು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ಧ ನೀವೇಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಭಾರ ಇಒ ಗಿರೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಪ್ರಭಾರ ಇಒ ಗಿರೀಶ್ ಮಾತನಾಡಿ  ಕಳೆದ ಸಭೆಯಲ್ಲಿ ಅಗೌರವ ತೋರಿರುವ ಅಂದಿನ ಕಾರ್ಯ ನಿರ್ವಾಹಕ ಅಧಿಕಾರಿ ವಿರುದ್ಧ ತಾ.ಪಂ.ಅಧ್ಯಕ್ಷರು, ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಈ ಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದರೆ ಅದನ್ನು ದಾಖಲಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ ಪಂಚಾಯಿತಿ ಪಿಡಿಒಗಳ ವಿರುದ್ಧ ಸದಸ್ಯರು ದೂರು ನೀಡಿದ್ದು, ಅವರಿಗೆ ನೋಟಿಸ್ ನೀಡಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್  , ತಾ.ಪಂ.ಉಪಾಧ್ಯಕ್ಷೆ ಸಾಕಮ್ಮ ಸಣ್ಣಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗರಾಜನ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರವಿಕುಮಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಿವಶಂಕರ್, ಬಿಸಿಎಂ ಅಧಿಕಾರಿ ಜಿ.ಜೆ.ಮಹೇಶ್, ಇನ್ನಿತರ ಅಧಿಕಾರಿಗಳು, ಸದಸ್ಯರು  ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: