
ಮೈಸೂರು
ಪರಿಸರ ಸ್ನೇಹಿ ತಂಡದ ವತಿಯಿಂದ 20 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ವೀರ ಯೋಧರಿಗೆ ಸನ್ಮಾನ
ಮೈಸೂರು,ಜು.26:- ಪರಿಸರ ಸ್ನೇಹಿ ತಂಡದ ವತಿಯಿಂದ 20 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಇಂದು ಜಲಪುರಿ ಪೊಲೀಸ್ ಕ್ವಾಟ್ರರ್ಸ್ ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಜೈ ಹಿಂದ್ ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ವೀರ ಯೋಧರಿಗೆ ಸನ್ಮಾನಿಸಲಾಯಿತು.
ಜೂನಿಯರ್ ಕಮಿಷನರ್ ಆಫೀಸರ್ ನೀಲಕಂಠ ಕುಮಾರ್ ಶೆಟ್ಟಿ, ಕೃಷ್ಣಾಜಿ ರಾವ್ , ಸುಬ್ರಹ್ಮಣ್ಯ, ಡಿ ತೆ೦ನಗಿ, ಉಮೇಶ್ ಎಚ್ ಬಿ , ಬಸವರಾಜ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾಜಿ ಮಹಾಪೌರ ಸಂದೇಶ್ ಸ್ವಾಮಿ ಮಾತನಾಡಿ ದೇಶಸೇವೆಗೆ ಯುವಜನತೆ ಮುಂದಾಗಲಿ. ದೇಶ ಕಾಯುವ ಸೈನಿಕರು ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಡುತ್ತಾರೆ. ಯುವ ಸಮೂಹ ಕೂಡ ದೇಶದ ಪ್ರಗತಿಗಾಗಿ ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಗಡಿ ಪ್ರದೇಶದಲ್ಲಿ ನಮ್ಮ ಸೈನಿಕರು ಶತ್ರು ರಾಷ್ಟ್ರಗಳಿಂದ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಇದರಿಂದ ನಾವು ದೇಶದ ಒಳಗಡೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದೇವೆ. ಇದೇ ರೀತಿ ಸಾವಿರಾರು ಯೋಧರು ಸಹ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ಮಾಡಿದ್ದಾರೆ. ಇಂತಹವರ ಸ್ಮರಣೆ ಅಗತ್ಯವಾಗಿದೆ. ಯುವಪೀಳಿಗೆ ದೇಶಮುಖಿಯಾಗಲಿ. ‘ಯುವಪೀಳಿಗೆ ದೇಹಮುಖಿಯಾಗಬಾರದು, ಬದಲಿಗೆ ದೇಶಮುಖಿಯಾಗಬೇಕು. ದೇಶದ ಅಭಿವೃದ್ಧಿಗೆ ಯುವಪೀಳಿಗೆ ಶ್ರಮಿಸಬೇಕು. ದೇಶವನ್ನು ಪ್ರೀತಿಸಬೇಕು. ಕೊಡುಗೆ ನೀಡಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು. ಭ್ರಷ್ಟಚಾರಕ್ಕೆ ಒತ್ತು ನೀಡಿದರೆ ದೇಶ ಹಾಳಾಗಲಿದೆ. ಜಾತಿಗೆ ಅಂಟಿದರೆ ಧರ್ಮ ಹಾಳಾಗಲಿದೆ. ಸಂಶಯಪಟ್ಟರೆ ದಾಂಪತ್ಯ ಹಾಳಾಗಲಿದೆ ಎಂಬುದನ್ನು ಯುವಪೀಳಿಗೆ ಅರ್ಥಮಾಡಿಕೊಳ್ಳಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜೂನಿಯರ್ ಕಮಿಷನರ್ ಆಫೀಸರ್ ನೀಲಕಂಠ ಕುಮಾರ್ ಶೆಟ್ಟಿ ಪಾಕ್ ಆಕ್ರಮಿತ ಸಮಸ್ಯೆ ಬಗೆಹರಿಸಿಕೊಳ್ಳಿ. ಭಯೋತ್ಪಾದಕರಿಂದ ನಮ್ಮ ಸೈನಿಕರು ದಿನನಿತ್ಯ ಸಾಯುತ್ತಿದ್ದಾರೆ .ಅವರು ಗೆರಿಲ್ಲಾ ಮಾದರಿಯಲ್ಲಿ ಯುದ್ಧ ಮಾಡುತ್ತಿದ್ದಾರೆ. ಒಳಗಿನಿಂದ ಮಾವೋಗಳು ನಕ್ಸಲೈಟ್ ಗಳು ತೊಂದರೆ ಕೊಡುತ್ತಿದ್ದಾರೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡರು. ವಿಶ್ವಸಂಸ್ಥೆ ಹೊಲದಲ್ಲಿ ಬೆದರು ಗೊಂಬೆಯಂತಿತ್ತು. ಭಾರತ ಅಭಿವೃದ್ಧಿ ಹೊಂದುವುದು ಚೀನಾಕ್ಕೆ ಬೇಡವಾಗಿದೆ. ಸಾವಿರಾರು ಕಿಲೋಮೀಟರ್ ಹಾಗೆ ಚೀನಾದ ವಶದಲ್ಲಿದೆ. ಪಾಕಿಸ್ತಾನಕ್ಕೆ ಚೀನಾ ಹಣ ಹಾಗೂ ಶಸ್ತಾಸ್ತ್ರ ನೀಡುತ್ತಿದೆ .ಚೀನಾದಲ್ಲಿ ಭಯೋತ್ಪಾದನೆ ಇಲ್ಲ. ಸರ್ಕಾರ ಮನಸ್ಸು ಮಾಡಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಹಾಗೆ ಮಾಡಬೇಕು. ಇದರಿಂದಾದರೂ ಮುಗ್ಧ ಜನರ ಹತ್ಯೆ ನಿಲ್ಲುವಂತಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ನಗರ ಪಾಲಿಕೆ ಸದಸ್ಯರಾದ ನಾರಾಯಣ ಲೋಲಪ್ಪ ,ಬಿಜೆಪಿ ಯುವ ಮುಖಂಡ ಕಡಕೊಳ ಜಗದೀಶ್ , ಬಿಜೆಪಿ ಮುಖಂಡರಾದ ಆನಂದ್, ಮುನಿರತ್ನ೦,ಶ್ರೀನಿವಾಸ್ ರಾಕೇಶ್ ,ಪರಿಸರ ಸ್ನೇಹಿ ತಂಡದ ಅಧ್ಯಕ್ಷರಾದ ಡಿ ಲೋಹಿತ್ ,ಸಂತೋಷ್, ಜೀವನ್, ಸುರೇಂದ್ರ, ಶ್ರೀನಿವಾಸ್, ನವೀನ್ ಶೆಟ್ಟಿ ,ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಶಿವಮ್ಮ ,ವೇದಾವತಿ ,ಉದಯ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)