ಮೈಸೂರು

ಪತ್ರಕರ್ತರು ಸಮಾಜವನ್ನು ಕಾಯುವ ಕಾವಲು ನಾಯಿಗಳಂತೆ ಕೆಲಸ ಮಾಡಬೇಕು : ಕೃಷ್ಣಪ್ರಸಾದ್ ಅಭಿಮತ

ಸಮಾಜವನ್ನು ತಿದ್ದಿ ಸರಿದಾರಿಯಲ್ಲಿ ಮುನ್ನಡೆಸುವ ಸಾಮರ್ಥ್ಯ ಪತ್ರಿಕೋದ್ಯಮಕ್ಕಿದ್ದು ಪತ್ರಕರ್ತರು ಸಮಾಜವನ್ನು ಕಾಯುವ ಕಾವಲು ನಾಯಿಗಳಂತೆ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್‍ ಅಭಿಪ್ರಾಯಪಟ್ಟರು.

ಬುಧವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ  ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಂಕು ಡೊಂಕುಗಳನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಮುಖ ಅಂಗವಾಗಿರುವ ಪತ್ರಿಕೋದ್ಯಮ ರಂಗದಲ್ಲಿ ಸೇವೆ ಸಲ್ಲಿಸ ಬಯಸುವವರು ಹಣಕ್ಕೆ ಪ್ರಾಮುಖ್ಯತೆ ನೀಡದೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನೀವು ಮಾಡುವ ವರದಿ ಪೂರ್ವಾಗ್ರಹ ಪೀಡಿತವಾಗಿರದೆ ನೇರ ಹಾಗೂ ಸತ್ಯದ ಪರವಾಗಿಬೇಕು ಎಂದು ಹೇಳಿದರು.

ಭಾರತೀಯ ಪತ್ರಿಕೋದ್ಯಮ ಸುಮಾರು 200 ವರ್ಷಗಳ ಇತಿಹಾಸ ಹೊಂದಿದೆ. ಅಂದಿನಿಂದ ಇಂದಿನವರೆಗೆ ಮಹತ್ತರ ಬದಲಾವಣೆಗಳನ್ನು ಕಂಡಿದೆ. ದೇಶದ ಜನತೆಗೆ ಅಗತ್ಯವಿರುವ ಸುದ್ದಿಗಳನ್ನು ತಿಳಿಸುವಲ್ಲಿ ಮುಂದಿದೆ. ಇಂದು ಈ ರಂಗಕ್ಕೆ ಪಾದಾರ್ಪಣೆ ಮಾಡುವವರು ಹಣ ಸಂಪಾದನೆಯನ್ನೆ ಮುಖ್ಯ ಗುರಿಯನ್ನಾಗಿಟ್ಟುಕೊಂಡಿದ್ದಾರೆ. ಇದರಿಂದ ಅಂತಹ ಪತ್ರಿಕೆಗಳು ಹೆಚ್ಚು ದಿನ ಬದುಕಲಾರವು. ಎಂದಿಗೂ ಹಣಕ್ಕೆ ಪ್ರಾಮುಖ್ಯತೆ ನೀಡಬಾರದು. ಸಮಸ್ಯೆಗಳನ್ನು ಎತ್ತಿಹಿಡಿದು ಅವುಗಳಿಗೆ ಪರಿಹಾರ ನೀಡಬೇಕು ಎಂದು ಸಲಹೆ ನೀಡಿದರು.

ಕೆಲವು ದಶಕಗಳ ಹಿಂದೆ ರಾಷ್ಟ್ರದ ಜನತೆ ಸುದ್ದಿಗಾಗಿ ಪತ್ರಿಕೆಗಳನ್ನೇ ಅವಲಂಬಿಸಿದ್ದರು. ಆದರೇ ತಂತ್ರಜ್ಞಾನದ ಬದಲಾವಣೆಯಿಂದ ಮೊಬೈಲ್, ಲ್ಯಾಪ್ ಟಾಪ್ ಹಾಗೂ ಅಂತರ್ಜಾಲಗಳ ಅವಿಷ್ಕಾರಗಳಿಂದ ಕುಳಿತಲ್ಲಿಯೇ ವಿಶ್ವದ ಯಾವುದೇ ಮೂಲೆಯಲ್ಲಿ ಸಂಭವಿಸುವ ಘಟನೆಗಳನ್ನು ವೀಕ್ಷಿಸಬಹುದಾಗಿದ್ದರೂ ಈ ಸೌಲಭ್ಯಗಳು ಉಳ್ಳವರಿಗೆ ಮಾತ್ರ ಲಭ್ಯವಿದೆ.  ಇತರರು ಪತ್ರಿಕೆಗಳನ್ನೆ ಅವಲಂಬಿಸಬೇಕಾದ ಅನಿವಾರ್ಯತೆ ಇದ್ದು, ದಿನಪತ್ರಿಕೆಗಳು ತಮ್ಮ ಎಂದಿನ ಮೌಲ್ಯವನ್ನು ಕಾಯ್ದುಕೊಳ್ಳಬೇಕು. ಯಾರ ಪರವೂ ಇಲ್ಲದೆ ವಿಶ್ವಾಸಾ‍ರ್ಹ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಜಾವಾಣಿ ಪತ್ರಿಕೆಯ ಸಹಾಯಕ ಸಂಪಾದಕ ರವೀಂದ್ರ ಭಟ್ಟ ಐನಕೈ ,ಪಬ್ಲಿಕ್ ಟಿವಿಯ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಬದ್ರುದ್ದೀನ್ ಕೆ. ಮಾಣಿ, ಟೈಮ್ಸ್ ಆಫ್ ಇಂಡಿಯಾ ಸಂಪಾದಕ ಸಾಹಿದ್ ಅಥಾವುಲ್ಲಾ ಉಪನ್ಯಾಸ ನೀಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಶಂಕರಪ್ಪ, ಶಿಬಿರದ ಸಂಚಾಲಕ ಕೆ.ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

comments

Related Articles

error: