ಮೈಸೂರು

ಸರಿಸಮ ವೇತನ ಆದೇಶ ಹಿಂಪಡೆದ ಸರ್ಕಾರದ ಕ್ರಮಕ್ಕೆ ಆಕ್ರೋಶ, ಸೂಕ್ತ ಕ್ರಮಕ್ಕೆ ಆಗ್ರಹ

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಹೊಂದದ ಶಿಕ್ಷಕರಿಗೆ ನೀಡಿದ ಸರಿ ಸಮ ವೇತನ ಆದೇಶವನ್ನು ಸರ್ಕಾರ ಹಿಂಪಡೆದಿದ್ದು ಇದರಿಂದ ನೂರಾರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಿ ಭವಿಷ್ಯವೇ ಅಂಧಕಾರಕ್ಕೀಡಾಗಲಿದೆ, ಆದ್ದರಿಂದ ಸರ್ಕಾರ ತಕ್ಷಣವೇ ಆದೇಶವನ್ನು ಹಿಂಪಡೆಯಬೇಕೆಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ ತರಬೇತಿ ಹೊಂದದ ಶಿಕ್ಷಕರುಗಳ ಸಂಘದ ಅಧ್ಯಕ್ಷ ಬಿ.ಸುಂದರ ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆದೇಶದಿಂದ ಜಿಲ್ಲೆಯಲ್ಲಿ ಸುಮಾರು 225 ಶಿಕ್ಷಕರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಈ ಕೂಡಲೇ ಆದೇಶವನ್ನು ಹಿಂಪಡೆದು 2011 ರಿಂದ ಅನ್ವಯವಾಗುವಂತೆ ತರಬೇತಿ ಹೊಂದಿದ ಶಿಕ್ಷಕರ ವೇತನಕ್ಕೆ ಸಮನಾಗಿ ವೇತನ ಹಾಗೂ ಪಿಂಚಣಿಯನ್ನು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು. ಈಗಾಗಲೇ 20 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ಸರ್ಕಾರದ ನಿಯಮದಿಂದ ಅನ್ಯಾಯವಾಗಲಿದೆ. ನೇಮಕಾತಿಯಲ್ಲಿ ನೇಮಕವಾದ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರನ್ನು ನಿಯಮದಲ್ಲಿ ಪರಿಗಣಿಸದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರಿದರು. ಕೊಟ್ಟಿರುವ ಸೌಲಭ್ಯಗಳನ್ನು ಕಿತ್ತುಕೊಳ್ಳುವುದರಿಂದ ಶಿಕ್ಷಕರಿಗೆ ಸಾಮಾಜಿಕವಾಗಿ ಅನ್ಯಾಯವಾಗಲಿದೆ. ಸರ್ಕಾರ ಮತ್ತು ಇಲಾಖೆ ಕಾನೂನು ಉಲ್ಲಂಘಿಸಿದ್ದು ಪರೋಕ್ಷವಾಗಿ ಶಿಕ್ಷಕರಿಗೆ ಶಿಕ್ಷೆಯಾಗಿದೆ ಎಂದ ಅವರು, ಸರ್ಕಾರ ಆದೇಶವನ್ನು ಪುನರ್ ಪರಿಶೀಲಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಧಾನ ಕಾರ್ಯದರ್ಶಿ ಚಿಕ್ಕರಾಯಪ್ಪ, ಉಪಾಧ್ಯಕ್ಷ ಮಹದೇವ್, ಸಹ ಕಾರ್ಯದರ್ಶಿ ನಾರಾಯಣ ಸ್ವಾಮಿ ಹಾಗೂ ಇತರ ಸಂತ್ರಸ್ಥ ಶಿಕ್ಷಕರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: