ದೇಶಪ್ರಮುಖ ಸುದ್ದಿ

ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ನಲ್ಲಿದ್ದ 700 ಪ್ರಯಾಣಿಕರ ರಕ್ಷಣೆ

ಮುಂಬೈ,ಜು.27-ಭಾರೀ ಮಳೆಯಿಂದಾಗಿ ಮುಂಬೈಯಿಂದ 100 ಕಿ.ಮೀ ದೂರದ ವಂಗಾನಿ ಮತ್ತು ಬದ್ಲಾಪುರ್ ಸ್ಟೇಶನ್‌ಗಳ ನಡುವೆ ಜಲಾವೃತಗೊಂಡು ಸ್ಥಗಿತಗೊಂಡಿದ್ದ ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಮಧ್ಯ ರೈಲ್ವೆ ಖಚಿತಪಡಿಸಿದೆ.

ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ 700 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಎನ್‌ಡಿಆರ್‌ಎಫ್‌, ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆ ತಂಡಗಳು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದೆ.

ಬೆಳಗಿನ ಜಾವ 3 ಗಂಟೆಯಿಂದ ಸ್ಥಗಿತಗೊಂಡಿದೆ. ಪ್ರಯಾಣಿಕರೇ ಈ ವಿಷಯ ತಿಳಿಸಿದ್ದಾರೆ. ಇದಕ್ಕೆ ಮೊದಲು ಸುಮಾರು 2000 ಮಂದಿ ಪ್ರಯಾಣಿಕರು ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿತ್ತು.

ರೈಲು ನಿಲುಗಡೆಯಾಗಿರುವ ಸ್ಥಳಕ್ಕೆ ಮೂರು ದೋಣಿಗಳನ್ನು ಕಳುಹಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ. ಪ್ರಯಾಣಿಕರನ್ನು ವಿಮಾನದ ಮೂಲಕ ರಕ್ಷಿಸಿ ಕರೆತರುವ ಬಗ್ಗೆ ಚಿಂತನೆ ನಡೆಸಲಾಯಿತು. ಆದರೆ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಸಿಕ್ಕಿಬಿದ್ದಿರುವುದರಿಂದ ಈ ಆಯ್ಕೆಯನ್ನು ಕೈಬಿಡಲಾಗಿದೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಚೇರಿ ಖುದ್ದಾಗಿ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿತ್ತು. ಪರಿಸ್ಥಿತಿ ಬಗ್ಗೆ ತಿಳಿಯಲು ಎರಡು ವಾಯುಪಡೆ ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿತ್ತು.

ಮಧ್ಯ ರೈಲ್ವೆಯ ಮುಂಬೈ ವಿಭಾಗದಲ್ಲಿ 3 ರೈಲುಗಳ ಸಂಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. 2 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಮತ್ತು 9 ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ಮಧ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮುಂಬಯಿ ಮಹಾನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಿಂದ 11 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಅಲ್ಲದೆ ಆಗಮಿಸಬೇಕಿದ್ದ 9 ವಿಮಾನಗಳ ಮಾರ್ಗ ಬದಲಿಸಲಾಗಿದ್ದು, ಸಮೀಪದ ಇತರ ಏರ್‌ಪೋರ್ಟ್‌ಗಳಿಗೆ ಕಳುಹಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. (ಎಂ.ಎನ್)

Leave a Reply

comments

Related Articles

error: