
ಪ್ರಮುಖ ಸುದ್ದಿಮೈಸೂರು
ಯುವ ಸಂಗೀತ ನಿರ್ದೇಶಕ ಮಂಜು ಕವಿಗೆ ‘ಭಾರತ ಕಲಾ ರತ್ನ’ ಪ್ರಶಸ್ತಿ
ಬೆಂಗಳೂರಿನ ಭಾರತೀಯ ವಿದ್ಯಾ ಭವನ್ ನಲ್ಲಿ ಸನ್ಮಾನ
ಮೈಸೂರು, ಜು.27 : ಸಿನಿಮಾ ರಂಗದಲ್ಲಿ ತನ್ನದೇ ಆದಾ ಛಾಪು ಮೂಡಿಸುತ್ತಿರುವ ಯುವ ಸಂಗೀತ ನಿರ್ದೇಶಕ ಮಂಜು ಕವಿ ಸಾಧನೆ ಗುರುತಿಸಿ ಚೆನೈ ಮೂಲದ ಇಂಟರ್ ನ್ಯಾಷನಲ್ ವರ್ಚುಯಲ್ ಫೀಸ್ ಯೂನಿವರ್ಸಿಟಿಯೂ ‘ಭಾರತ ಕಲಾರತ್ನ’ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದೆ.
ಯುವ ಸಾಹಿತಿ, ಕವಿ, ಸಂಗೀತ ನಿರ್ದೇಶಕ ಮಂಜುಕವಿ ಜೆ.ಪಿ.ನಗರದ ನಿವಾಸಿಯಾಗಿದ್ದು, ಕೇವಲ ಮೂರು ವರ್ಷಗಳಲ್ಲಿ ಇವರ ನಿರ್ದೇಶನ ಹಾಗೂ ರಾಗ ಸಂಯೋಜನೆಯಲ್ಲಿ 150ಕ್ಕೂ ಹೆಚ್ಚು ದೇವರನಾಮ ಆಲ್ಬಂ ಮೂಡಿದ್ದು, ಇದರೊಂದಿಗೆ ಹಲವು ಸಿನಿಮಾ ಹಾಡಿಗೆ ರಾಗ ಸಂಯೋಜನೆ ಮಾಡಿರುವರು.
ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರೇಕೆರೆ ಹಳ್ಳಿ ಗ್ರಾಮದ ಯುವಕ ಮಂಜುಕವಿ 2015 ರಿಂದ ಇಲ್ಲಿಯವರೆಗೆ ಒಟ್ಟಾರೆಯಾಗಿ 450ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ, ಸಂಗೀತ ನೀಡಿದ್ದಾರೆ. ಸಿಂಹ ಹಾಕಿದ ಹೆಜ್ಜೆ, ಅಮವಾಸ್ಯೆ, ಗಾಯತ್ರಿ, ಛಾಯಾ, ಹೆಚ್, ನನ್ನ ಹೆಸರು ಕಿಶೋರ ಏಳ್ ಪಾಸ್ ಎಂಟು ಮೊದಲಾದ ಚಿತ್ರಗಳಿಗೆ ಸಂಗೀತ ನೀಡಿರುವರು.
ಇವರ ರಾಗ ಸಂಯೋಜನೆಯಲ್ಲಿ ಮೂಡಿರುವ ಗೀತೆಗಳನ್ನು ಖ್ಯಾತ ಗಾಯಕರಾದ ವಿಜಯಪ್ರಕಾಶ್, ಮಮತಾ ಶರ್ಮಾ, ಟಿಪ್ಪು, ಸೋನ್ ನಿಗಮ್ ಮೊದಲಾದವರು ಹಾಡಿರುವರು. ನನ್ನ ಹೆಸರು ಕಿಶೋರ್ ಏಳ್ ಪಾಸ್ ಎಂಟು ಚಿತ್ರದ ಅ ಆ ಇ ಈ ಫಸ್ಟ್ ಎಬಿಸಿಡಿ ನೆಕ್ಸ್ಟ್ ಹಾಡು ಸಾಮಾಜಿಕ ಜಾಲ ತಾಣ ‘ಯೂ ಟ್ಯೂಬ್’ ನಲ್ಲಿ ವೈರಲ್ ಆಗಿದ್ದು ಐವತ್ತು ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ ಎಂದು ಸ್ವತಃ ಮಂಜುಕವಿ “ಸಿಟಿ ಟುಡೆ” ಗೆ ತಿಳಿಸಿದ್ದರು.
ಇಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐವಿಪಿಯು ಅಧ್ಯಕ್ಷ ಡಾ.ಕೆ.ಅಶೋಕ್ ಕುಮಾರ್, ಸೆನೆಟರ್ ಡಾ. ಪಿ.ಮ್ಯಾನ್ಯುಲ್ ಇವರುಗಳು ಪ್ರಶಸ್ತಿ ಪ್ರದಾನ ಮಾಡಿದರು, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಶಾಸಕ ಕೆ.ಟಿ.ಶ್ರೀಕಾಂತೇಗೌಡ, ಗುಪ್ತ ಕಾಲೇಜಿನ ಪ್ರಾಂಶುಪಾಲರಾದ ಜಿ.ಆರ್.ಸುಧಾಕರ್ ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಪಾತ್ರರಾದ ಇವರನ್ನು ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಅಭಿನಂದಿಸಿ ಶುಭ ಕೋರಿದ್ದಾರೆ. (ಕೆ.ಎಂ.ಆರ್)