ಮೈಸೂರು

‘ಗ್ರಾಮೀಣ ಪ್ರದೇಶದ ಪ್ರತಿಭೆಯನ್ನು ಗುರುತಿಸುವಂತಾಗಬೇಕು’ : ನಾಗೇಂದ್ರನ್ ಆರ್.ತುಪ್ಪೂರ್

ಮೈಸೂರು, ಜು.28- ನಗರದ ಅಭಿನವ ಶಂಕರಾಲಯದಲ್ಲಿ ಇಂದು ರಾಜರಾಜೇಶ್ವರಿ ಸೇವಾ ಟ್ರಸ್ಟ್ ನಿಂದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕ ಹಾಗೂ ಟ್ರಸ್ಟ್ ನ ವ್ಯವಸ್ಥಾಪಕ ನಾಗೇಂದ್ರನ್ ಆರ್.ತುಪ್ಪೂರ್ ಅವರು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳನ್ನು ಗುರುತಿಸುವಲ್ಲಿ ಮುಂದಾಗಬೇಕು. ಏಕೆಂದರೆ ಗ್ರಾಮೀಣ ಪ್ರದೇಶದಲ್ಲಿ ನಗರ ಪ್ರದೇಶಕ್ಕೆ ಹೋಲಿಸಿದರೆ ಸೌಲಭ್ಯಗಳು ಕಡಿಮೆಯಿದ್ದು, ಅಂತಹದರಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇರುವ ಕಡಿಮೆ ಸೌಲಭ್ಯಗಳಲ್ಲಿಯೇ ಓದಿ, ಮುಂದೆ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಪ್ರತಿಭೆಗಳನ್ನು ಗುರುತಿಸುವ ಜವಾಬ್ದಾರಿ ಟ್ರಸ್ಟ್ ನ ಪ್ರಮುಖ ಗುರಿ ಎಂದು ತಿಳಿಸಿದ ಅವರು, ನಮಗೆ ವಿದ್ಯಾರ್ಥಿಗಳು ಪಡೆಯುವ ಅಂಕಗಳು ಮುಖ್ಯವಲ್ಲ. ಅವರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೇ ಮುಂದುವರಿಸಿ ಸಮಾಜದಲ್ಲಿ ಬದುಕನ್ನು ಕಟ್ಟಿಕೊಂಡು ತಾವೂ ಕೂಡ ತಮ್ಮ ಕೈಲಾದ ಸಹಾಯವನ್ನು ಸಮಾಜಕ್ಕೆ ನೀಡಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಇನ್ಫೋಸಿಸ್‍ನ ಕೃಷ್ಣಪ್ರಸಾದ್ ಅವರು ಮಾತನಾಡಿ, ‘ಬಡತನ ಇರುವುದಕ್ಕೆ ಯಾರೂ ಅಧೀನರಾಗಬೇಕಾಗಿಲ್ಲ. ಸಾಧಿಸುವ ಗುರಿ ಹಾಗೂ ಛಲ ಸ್ಪಷ್ಟವಾಗಿದ್ದಲ್ಲಿ ಉತ್ತಮ ಮಾರ್ಗದಲ್ಲಿ ನಡೆದರೆ ಸಾಕು, ಸಮಾಜದಲ್ಲಿ ಸರಿಯಾದ ನೆಲೆಯನ್ನು ತಲುಪಬಹುದೆಂದು ವಿದ್ಯಾರ್ಥಿ ವೃಂದಕ್ಕೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಗೌರವ ಕಾರ್ಯದರ್ಶಿ ಹಾಗೂ ಶಿಕ್ಷಕ ಕೆ.ಸುರೇಶ್‍ರವರು ಮಾತನಾಡಿ, ಶಿಕ್ಷಣ ಎಂದರೆ ಸಾಮಾನ್ಯವಾಗಿ ಎಲ್ಲರೂ ಶಾಲಾ, ಕಾಲೇಜುಗಳಲ್ಲಿ ಮಾತ್ರ ಕಲಿಯುವ ಶಿಕ್ಷಣ ಎಂದು ತಿಳಿದಿದ್ದಾರೆ. ಆದರೆ ಶಾಲಾ, ಕಾಲೇಜಿನಲ್ಲಿ ಕಲಿಯುವುದರ ಜೊತೆಗೆ ಮನೆಯಲ್ಲಿಯೂ ಕೂಡ ತಂದೆ, ತಾಯಿಗಳು, ಪೋಷಕರು ನೀಡುವ ಆಚಾರ-ವಿಚಾರ, ವ್ಯವಹಾರಗಳು, ಸುಸಂಸ್ಕೃತಿಯನ್ನು ಕಲಿತಾಗ ಉತ್ತಮ ಜೀವನವನ್ನು ರೂಢಿಸಿಕೊಳ್ಳಬಹುದೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಟ್ರಸ್ಟಿಗಳಾದ ಶ್ರೀನಾಥ್, ಚಂದ್ರಶೇಖರ್, ದಾನಿಗಳಾದ ನಾಗಲಕ್ಷ್ಮಿ ಹರಿಹರೇಶ್ವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭಕ್ಕೆ ಪನ್ನಗಶ್ರೀ ಪ್ರಾರ್ಥಿಸಿದರೆ, ಟ್ರಸ್ಟಿಗಳಾದ ಚಂದ್ರಶೇಖರ್ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಸುರೇಶ್ ಆರ್. ಕಾರ್ಯಕ್ರಮ ನಿರೂಪಿಸಿದರು. ( ಜಿ.ಕೆ,ಎಸ್.ಎಚ್)

Leave a Reply

comments

Related Articles

error: