
ಪ್ರಮುಖ ಸುದ್ದಿ
ಹೆದ್ದಾರಿ, ರೈಲ್ವೆ ಮಾರ್ಗದ ಯೋಜನೆ : ಪಕ್ಷ, ಜಾತಿ ಭೇದ ಮರೆತು ಹೋರಾಡಲು ಕರೆ
ರಾಜ್ಯ(ಮಡಿಕೇರಿ) ಜು.30 :- ಕೊಡಗು ಜಿಲ್ಲೆ ಮತ್ತು ಕಾವೇರಿ ಜಲಾನಯನ ಪ್ರದೇಶಕ್ಕೆ ಮಾರಕವಾಗಬಲ್ಲ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಮಾರ್ಗದ ವಿರುದ್ಧ ಪಕ್ಷ ಮತ್ತು ಜಾತಿ ಭೇದ ಮರೆತು ಜಿಲ್ಲೆಯ ಜನತೆ ಒಗ್ಗಟ್ಟಾಗಿ ಧ್ವನಿ ಎತ್ತಬೇಕೆಂದು ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯ, ಹೆದ್ದಾರಿ ನಿರ್ಮಾಣದಿಂದ ಕೊಡಗಿನ ಅಭಿವೃದ್ಧಿ ಎಂದು ಪ್ರತಿಬಿಂಬಿಸಲಾಗುತ್ತಿದೆ, ಆದರೆ ಈ ಬೃಹತ್ ಯೋಜನೆಯಿಂದ ಕೊಡಗು ನಾಶವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣವಾದರೆ ಇತರ ರಾಜ್ಯಗಳಿಗೆ ಸಹಕಾರಿಯೇ ಹೊರತು ಕೊಡಗಿಗೆ ಯಾವುದೇ ಪ್ರಯೋಜನವಿಲ್ಲ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮತ್ತು ವೈದ್ಯರುಗಳಿಲ್ಲದ ಆಸ್ಪತ್ರೆಗಳ ಬಗ್ಗೆ ಕಾಳಜಿ ತೋರಬೇಕಾಗಿದೆ ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಯ ಮೂಲಕ 7 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಪ್ರಸ್ತಾಪವಿದ್ದು, ಈ ಪೈಕಿ ಈಗಾಗಲೇ ಬಂಟ್ವಾಳ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಹೆದ್ದಾರಿ ನಿರ್ಮಾಣದಿಂದ ಅಪಘಾತಗಳು ಕಡಿಮೆಯಾಗುತ್ತದೆ ಎನ್ನುವುದು ತಪ್ಪು ಅಭಿಪ್ರಾಯ. ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಇವುಗಳ ಸೌಂದರ್ಯವನ್ನು ನೋಡಲು ಪ್ರವಾಸಿಗರು ಬರುತ್ತಾರೆಯೇ ಹೊರತು ಹೆದ್ದಾರಿಗಳನ್ನು ನೋಡಲು ಅಲ್ಲ. ಯಾವುದೇ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಪ್ರವಾಸಿಗರ ಆಗಮನದಿಂದ ಜಿಲ್ಲೆಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇವುಗಳ ವಿಲೇವಾರಿಗೆ ವೈಜ್ಞಾನಿಕ ಘಟಕಗಳನ್ನು ಸ್ಥಾಪಿಸಲಿ ಎಂದು ಒತ್ತಾಯಿಸಿದರು.
ಜನರ ಆಶೋತ್ತರಗಳಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕೇ ಹೊರತು, ಮಾರಕವಾಗುವ ಯೋಜನೆಗಳನ್ನಲ್ಲ. ನಾವು ಅಭಿವೃದ್ಧಿ ಕಾರ್ಯಗಳ ವಿರೋಧಿಗಳಲ್ಲ. ಆದರೆ, ಜಿಲ್ಲೆಯ ಸಂಸ್ಕೃತಿ, ಆಚಾರ-ವಿಚಾರ, ಬೆಟ್ಟಗುಡ್ಡಗಳ ನಾಶಕ್ಕೆ ಕಾರಣವಾಗುವ ಯೋಜನೆ ಬೇಡ ಎನ್ನುವುದಷ್ಟೆ ನಮ್ಮ ಅಭಿಪ್ರಾಯವಾಗಿದೆ ಎಂದು ರಾಜೀವ್ ಬೋಪಯ್ಯ ಸ್ಪಷ್ಟಪಡಿಸಿದರು.
ವೇದಿಕೆಯ ಪ್ರಮುಖರು ಹಾಗೂ ವೈಲ್ಡ್ ಲೈಫ್ ಸೊಸೈಟಿಯ ಮಾಜಿ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲುಮಾರ್ಗ ಯೋಜನೆಯ ವಿರುದ್ಧ ಈಗಾಗಲೆ ನ್ಯಾಯಾಲಯದ ಮೊರೆ ಹೋಗಲಾಗಿದ್ದು, ಆಗಸ್ಟ್ 20 ರಂದು ವಿಚಾರಣೆ ನಡೆಯಲಿದೆ. ಕೋಟ್ಯಂತರ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಕಾವೇರಿ ಹುಟ್ಟುವ ಕೊಡಗು ಜಿಲ್ಲೆಯ ನಾಶಕ್ಕೆ 30 ಸಾವಿರ ಕೋಟಿ ರೂ.ಗಳ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಆರೋಪಿಸಿದ ಅವರು, ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ ಎಂದರು.
ಕಳೆದ ವರ್ಷ ಸಂಭವಿಸಿದ ಮಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಇಲ್ಲಿಯವರೆಗೆ ಸೂಕ್ತ ಪರಿಹಾರವನ್ನು ನೀಡಿಲ್ಲ. ಆದರೆ, ಜಿಲ್ಲೆಯನ್ನು ನಾಶ ಮಾಡಲು ಕೋಟಿ ಕೋಟಿ ಹಣವನ್ನು ವಿನಿಯೋಗಿಸಲಾಗುತ್ತಿದೆ ಎಂದು ಕರ್ನಲ್ ಮುತ್ತಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಕೊಡಗಿನ ಪರಿಸರಕ್ಕೆ ಚತುಷ್ಪಥ ರಸ್ತೆಯ ಅಗತ್ಯವಿಲ್ಲ. ದ್ವಿಪಥ ರಸ್ತೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದರು. ಸಾರ್ವಜನಿಕರ ಆಸ್ತಿಗೆ ಹಾನಿಯನ್ನುಂಟು ಮಾಡಿ, ಕಟ್ಟಡಗಳನ್ನು ತೆರವುಗೊಳಿಸಿ, ಬೆಟ್ಟ ಗುಡ್ಡ, ಮರಗಳನ್ನು ನಾಶಮಾಡಿ, ಹೆದ್ದಾರಿ ನಿರ್ಮಾಣದ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಅವರು, ಪ್ರವಾಸಿಗರನ್ನು ಆಕರ್ಷಿಸಲು ಹೆದ್ದಾರಿಯೇ ಬೇಕಿಲ್ಲವೆಂದರು. ಈಗಾಗಲೆ 6 ಲಕ್ಷ ಜನಸಂಖ್ಯೆಯ ಸಣ್ಣ ಜಿಲ್ಲೆ ಕೊಡಗಿಗೆ ವಾರ್ಷಿಕ 18 ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುವ ಅನಿವಾರ್ಯತೆ ಇಲ್ಲವೆಂದು ಅವರು ಅಭಿಪ್ರಾಯಪಟ್ಟರು.
ಕೊಡಗನ್ನು ಹರಿದು ಹಾಕಲು, ಕಾವೇರಿಯನ್ನು ನಾಶಮಾಡಲು ನಮ್ಮ ತೆರಿಗೆ ಹಣವನ್ನು ವ್ಯಯಿಸುವುದು ಬೇಡವೆಂದ ಕರ್ನಲ್ ಮುತ್ತಣ್ಣ, ರೈಲ್ವೆ ಮತ್ತು ಹೆದ್ದಾರಿ ಯೋಜನೆಯಿಂದ ರಾಜಕಾರಣಿಗಳು ಹಾಗೂ ಗುತ್ತಿಗೆದಾರರಿಗೆ ಲಾಭವಾಗುತ್ತದೆಯೇ ಹೊರತು ಜಿಲ್ಲೆಯ ಜನತೆಗೆ ಯಾವುದೇ ಪ್ರಯೋಜನವಿಲ್ಲವೆಂದರು.
ಮುಕ್ಕೋಡ್ಲು ಗ್ರಾಮದ ಸಂತ್ರಸ್ತ ತಂಬುಕುತ್ತೀರ ಪೂವಯ್ಯ ಮಾತನಾಡಿ, ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದರು ಇಲ್ಲಿಯವರೆಗೆ ಸೂಕ್ತ ಪರಿಹಾರ ದೊರೆತ್ತಿಲ್ಲ. ಈ ರೀತಿಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ಬದಲು ಕೊಡಗಿಗೆ ಮಾರಕವಾಗುವಂತಹ ಯೋಜನೆಗಳಿಗೆ ಆತುರ ಪಡುತ್ತಿರುವುದು ಸರಿಯಲ್ಲವೆಂದರು.
ಗೋಣಿಕೊಪ್ಪದ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಎಸ್.ಶರತ್ಕಾಂತ್ ಮಾತನಾಡಿ, ಮುಂದಿನ ಪೀಳಿಗೆಗೆ ಸುಂದರ ಪರಿಸರದ ಈ ಕೊಡಗನ್ನು ಉಳಿಸಿಕೊಳ್ಳಬೇಕಾಗಿದೆ. ಮಾರಕವಾಗುವ ಯೋಜನೆಗಳನ್ನು ವಿರೋಧಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೋದೂರು ಶಿವಶಂಕರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)