ಪ್ರಮುಖ ಸುದ್ದಿಮೈಸೂರು

ಮಾಜಿ ಸಿಎಂ ಎಸ್.ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ನಾಪತ್ತೆ

ಮೈಸೂರು/ಮಂಗಳೂರು, ಜು.30:-  ಸೋಮವಾರ ರಾತ್ರಿ ಇದ್ದಕ್ಕಿದ್ದಂತೆ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೇ ಸಂಸ್ಥಾಪಕ  ಸಿದ್ಧಾರ್ಥ್ ಅವರು ನಾಪತ್ತೆಯಾಗಿದ್ದು, ಅವರ ಶೋಧ ಕಾರ್ಯ ಮುಂದುವರಿದಿದೆ.

ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಮೈಸೂರು –ಬೆಂಗಳೂರು ಸೇರಿದಂತೆ ಹಲವೆಡೆ ಕೆಫೆ ಕಾಫಿ ಡೇಯನ್ನು ಹೊಂದಿದ್ದರು. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಮರಗೋಡು ಸಮೀಪ 20 ಸಾವಿರ ಎಕರೆ ಕಾಫಿತೋಟವನ್ನು ಹೊಂದಿದ್ದು, ಎಬಿಸಿ ಕಾಫಿ ಕ್ಯೂರಿಂಗ್​​​​​, ಅಂಬರವೇಲಿ ವಸತಿ ಶಾಲೆ ಹಾಗೂ ಸಾರೈ ಹೋಟೆಲ್​​​​​​ನ್ನು ನಡೆಸುತ್ತಿದ್ದರು.

ಕಾಫಿ ಡೇ ಸಂಸ್ಥಾಪಕರಾಗಿರುವ ಅವರು ಬೆಂಗಳೂರು ಸೇರಿದಂತೆ ದೇಶದ ಅನೇಕ ಕಡೆ  ಕೆಫೆ ಕಾಫಿ ಡೇ ಹೊಂದಿದ್ದಾರೆ. ಮೂರು ವರ್ಷಗಳ ಹಿಂದೆ ಸಿದ್ಧಾರ್ಥ್​ ತಂದೆ ಗಂಗಹೆಗ್ಡೆ ಹಾಗೂ ಮಾವ ಎಸ್​.ಎಂ. ಕೃಷ್ಣ ಹೆಸರಿನಲ್ಲಿ ಬಡರೋಗಿಗಳಿಗೆ ಉಚಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿದ್ದರು.

ಅವರು ನಿನ್ನೆ ಊರಿಗೆ ತೆರಳೋಣವೆಂದು ತಿಳಿಸಿ ಹೊರಟವರು ಮತ್ತೆ ವಾಪಸ್ ಬರಲಿಲ್ಲವೆಂದು ಅವರ ಕಾರು ಚಾಲಕ ಬಸವರಾಜ್ ಪಾಟೀಲ್ ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

29-7-2019ರಂದು ಬೆಳಿಗ್ಗೆ ಸದಾಶಿವನಗರದಲ್ಲಿರುವ ಸಿದ್ದಾರ್ಥ ಅವರ ಮನೆಗೆ ಹೋಗಿದ್ದು, ಅವರ ಇನ್ನೋವಾ ಕಾರಿನಲ್ಲಿ ವಿಠ್ಠಲ ಮಲ್ಯ ರಸ್ತೆಯಲ್ಲಿರುವ ಅವರ ಕಛೆರಿಗೆ ಹೋಗಿದ್ದೆವು. ಮನೆಗೆ ಬಂದ ನಂತರ ಊರಿಗೆ ಹೋಗಬೇಕಿದೆ. ಲಗೇಜ್ ತಗೊಂಡು ಬಾ ಎಂದು ತಿಳಿಸಿದ್ದು, ಲಗೇಜ್ ತಗೊಂಡು 12.30ರ ಸಮಯಕ್ಕೆ ಬಂದೆ. ನಮ್ಮ ಮಾಲೀಕರು ಸಕಲೇಶಪುರದ ಕಡೆಗೆ ನಡೆ ಎಂದರು. ಬೆಂಗಳೂರು ಬಿಟ್ಟು ಸಕಲೇಶಪುರದ ಕಡೆ ತೆರಳುತ್ತಿದ್ದಂತೆ ಮಂಗಳೂರು ಕಡೆ ಹೋಗುವ ಎಂದರು. ಮಂಗಳೂರು ಕಡೆ ಕಾರು ಚಲಾಯಿಸಿದಾಗ ಎಡಗಡೆ ತೆಗೆದುಕೋ ಸೈಟ್ ಕಡೆ ಹೋಗಬೇಕು ಎಂದರು. ಎಡಗಡೆ ಕೇರಳ ಹೈವೇ ರಸ್ತೆಯಲ್ಲಿ ಬಂದಾಗ ನದಿಗೆ  ಅಡ್ಡಲಾಗಿ ಕಟ್ಟಿರುವ ದೊಡ್ಡ ಸೇತುವೆ ಆರಂಭವಾಗುತ್ತಿದ್ದಂತೆ ನನ್ನಲ್ಲಿ ಕಾರ್ ನಿಲ್ಲಿಸಲು ಹೇಳಿ  ಅವರು ಕಾರಿನಿಂದ ಇಳಿದು ಸೇತುವೆ ತುದಿಗೆ ಗಾಡಿ ನಿಲ್ಲಿಸು ನಾನು ವಾಕಿಂಗ್ ಮಾಡಿಕೊಂಡು ಬರುತ್ತೇನೆಂದು ಹೇಳಿದರು. ಅವರು ತಿಳಿಸಿದಂತೆ ಕಾರನ್ನು ಸೇತುವೆಯ ತುದಿಗೆ ತಂದು ನಿಲ್ಲಿಸಿದೆ. ಮಾಲಿಕರು ನನ್ನ ಹತ್ತಿರ ಬಂದವರು ನೀಬನು ಕಾರಿನಲ್ಲಿಯೇ ಕುಳಿತಿರು ಎಂದವರು ರಸ್ತರೆಯ ಬಲಭಾಗದ ಕಡಗೆ ಹೋಗಿ ವಾಪಸ್ ಬ್ರಿಡ್ಜ್ ನ್ನು ದಾಟಿಕೊಂಡು ಮಂಗಳೂರು ಕಡೆಗೆ ಬ್ರಿಡ್ಜ್ ನಲ್ಲಿ ವಾಕಿಂಗ್ ಮಾಡಿಕೊಂಡು ಹೋದರು. ಎಷ್ಟು ಹೊತ್ತಾದರೂ ಮಾಲೀಕರು ವಾಪಸ್ ಬಾರದ ಕಾರಣ ಅವರ ಮೊಬೈಲ್ ನಂಬರ್ ಗೆ ಕರೆ ಮಾಡಿದೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮಾಲಿಕರ ಮಗನಾದ ಅಮಾರ್ತ್ಯ ಹೆಗ್ಡೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇನೆ. ಅವರು ಸಾಧಾರಣ ಮೈಕಟ್ಟು ಹೊಂದಿದ್ದು, ದುಂಡುಮುಖ, ಕಾಣೆಯಾಗಿರುವ ಸಮಯದಲ್ಲಿ ಕಪ್ಪುಬಣ್ಣದ ಟೀ ಶರ್ಟ್, ಜೀನ್ಸ್ ಪ್ಯಾಮಟ್ ಕಪ್ಪುಬಣ್ಣದ ಬೂಟು ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಕಾಫಿ ತೋಟ ಕಾರ್ಮಿಕರು, ಕಾಫಿ ಕ್ಯೂರಿಂಗ್ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ನೀರವ ಮೌನ ಆವರಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: