ಕರ್ನಾಟಕಪ್ರಮುಖ ಸುದ್ದಿ

ಐಟಿ ಕಿರುಕುಳದಿಂದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡರಾ: ಪತ್ರದಲ್ಲೇನಿದೆ?

ಬೆಂಗಳೂರು,ಜು.30-ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಆಡಳಿತ ನಿರ್ದೇಶಕ ಸಿದ್ಧಾರ್ಥ ನೇತ್ರಾವತಿ ನದಿ ತೀರದ ಸಮೀಪ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಈ ನಡುವೆ ಸಿದ್ಧಾರ್ಥ ಎರಡು ದಿನಗಳ ಹಿಂದೆ ಆಡಳಿತ ಮಂಡಳಿ ನಿರ್ದೇಶಕರಿಗೆ, ನೌಕರರಿಗೆ ಬರೆದಿರುವ ಪತ್ರ ಇದೀಗ ಬಹಿರಂಗಗೊಂಡಿದೆ.

ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ ಉದ್ದೇಶ ನನಗಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕೆಫೆ ಕಾಫಿ ಡೇ ನಿರ್ದೇಶಕ ಮಂಡಳಿಯ ಸದಸ್ಯರಿಗೆ ಸಿದ್ಧಾರ್ಥ ಜು.27ರಂದು ಪತ್ರ ಬರೆದಿದ್ದರು.

37 ವರ್ಷಗಳ ಕಾಲ ಕಂಪನಿಯ ಯಶಸ್ವಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಆದರೆ ನನ್ನಿಂದ ಯಶಸ್ವಿ ಉದ್ಯಮಿಯಾಗಲು ಸಾಧ್ಯವಾಗಿಲ್ಲ. ಆರು ತಿಂಗಳ ಹಿಂದೆ ತಮ್ಮ ಸ್ನೇಹಿತರೊಬ್ಬರ ಬಳಿ ಅಪಾರ ಪ್ರಮಾಣದ ಸಾಲ ಪಡೆದಿದ್ದೇನೆ. ಇತರ ಸಾಲಗಾರರ ಒತ್ತಡದಿಂದ ನನಗೆ ಈ ಪರಿಸ್ಥಿತಿ ಬಂದಿದೆ. ನಾವು ತೆರಿಗೆ ಕಟ್ಟಿದ್ದರು ಐಟಿ ಡಿಜಿಯಿಂದ ಕಿರುಕುಳ ನೀಡುತ್ತಿದ್ದರೂ, ಇದರಿಂದಾಗಿ ಕಂಪನಿಯಲ್ಲಿ ಹಣದ ಸಮಸ್ಯೆ ಉಂಟಾಯಿತು. ಯಾರಿಗೂ ಮೋಸ ಮಾಡುವ, ದಿಕ್ಕು ತಪ್ಪಿಸುವ ಉದ್ದೇಶ ನನಗಿರಲಿಲ್ಲ. ಆದರೆ ಈಗ ಎಲ್ಲವೂ ನನ್ನ ಕೈ ಮೀರಿ ಹೋಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಐಟಿಯ ಹಿಂದಿನ ಡಿಜಿ ತಮಗೆ ಅತಿ ಹೆಚ್ಚು ಕಿರುಕುಳ ನೀಡಿದ್ದಾರೆ. 2 ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದರು. ಇದರಿಂದ ನನ್ನ ಮೈಂಡ್ ಟ್ರೀ ಕಂಪನಿಯ ಶೇರು ಮಾರಾಟ ಮಾಡಲು ಸಮಸ್ಯೆಯಾಯಿತು. ಇದರಿಂದಾಗಿ ನಾನು ಮತ್ತಷ್ಟು ಸಾಲಗಾರನಾಗಬೇಕಾಯಿತು. ಅದಾದ ಬಳಿಕೆ ಕಾಫಿ ಡೇ ಷೇರುಗಳ ಮೇಲೆ ಕಣ್ಣು ಬಿತ್ತು. ಆದಾಯ ತೆರಿಗೆ ಇಲಾಖೆಯಿಂದ ನಿರಂತರವಾಗಿ ನನಗೆ ಕಿರುಕುಳ ನೀಡಲಾಯಿತು. ನನಗೆ ಎಷ್ಟೇ ತೊಂದರೆಯಾಗಿದ್ದರೂ ಒತ್ತಡದ ನಡುವೆಯೂ ಐಟಿ ರಿಟರ್ನ್ಸ್ ಸಲ್ಲಿಸಿದ್ದೇನೆ. ಈಗ ಒತ್ತಡ ನನ್ನಿಂದ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಠಿಣ ಪರಿಶ್ರಮದಿಂದ ನಮ್ಮ ಕಂಪನಿಯಲ್ಲಿ 30 ಸಾವಿರ ಉದ್ಯೋಗ (ಕಾಫಿ ಡೇ ಮತ್ತು ಸಬ್ಸಿಡರಿಗಳಲ್ಲಿ) ಹಾಗೂ ತಂತ್ರಜ್ಞಾನ ಕಂಪನಿಯಲ್ಲಿ 20 ಸಾವಿರ (ಮೈಂಡ್ ಟ್ರೀ?) ಸೃಷ್ಟಿ ಮಾಡಿದ್ದೆ. ಆದರೆ ಇವುಗಳಿಗೆ ಒಂದು ಸರಿಯಾದ ಬಿಜಿನೆಸ್ ಮಾಡೆಲ್ ಸೃಷ್ಟಿ ಮಾಡುವಲ್ಲಿ ಸೋತು ಹೋದೆ ಎಂದು ಸಹ ಬರೆದಿದ್ದಾರೆ.

ಇದರ ಜತೆಗೆ ಕಂಪನಿ ಹೆಸರಿನಲ್ಲಿ ನಡೆದಿರುವ ವ್ಯವಹಾರಗಳನ್ನು ಅವರು ಇಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲಾ ತಪ್ಪುಗಳಿಗೆ ನಾನೊಬ್ಬನೇ ಹೊಣೆಗಾರ. ನನ್ನ ತಂಡವಾಗಲೀ, ನನ್ನ ಆಡಿಟರ್‌ಗಳಾಗಲೀ, ಹಿರಿಯ ವ್ಯವಸ್ಥಾಪಕರುಗಳಿಗಾಲೀ ಕೆಲವೊಂದು ಕೊಡು ಕೊಳ್ಳುವಿಕೆ ಬಗ್ಗೆ ಮಾಹಿತಿ ಇಲ್ಲ. ಕಾನೂನು ನನ್ನನ್ನು ಮಾತ್ರವೇ ಪ್ರಶ್ನಿಸಬೇಕು. ನನ್ನ ಕುಟುಂಬವನ್ನೂ ಈ ವ್ಯವಹಾರದಿಂದ ದೂರ ಇಟ್ಟಿದ್ದೆ ಎಂದು ಸಿದ್ಧಾರ್ಥ ವಿವರಿಸಿದ್ದಾರೆ.

ಕೆಫೆ ಕಾಫಿ ಡೇ ವ್ಯವಹಾರದಲ್ಲಿ ಸಿದ್ಧಾರ್ಥ ಅವರಿಗೆ ಭಾರಿ ನಷ್ಟವಾಗಿತ್ತು. 8 ಸಾವಿರ ಕೋಟಿ ರೂ.ವರೆಗೂ ನಷ್ಟವಾಗಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹೂಡಿಕೆಯನ್ನು ಹಿಂದಿರುಗಿಸುವಂತೆ ನಿರ್ದೇಶಕ ಮಂಡಳಿ ಸದಸ್ಯರು ಸಿದ್ಧಾರ್ಥ ಮೇಲೆ ಒತ್ತಡ ಹೇರುತ್ತಿದ್ದರೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. (ಎಂ.ಎನ್)

Leave a Reply

comments

Related Articles

error: