ಪ್ರಮುಖ ಸುದ್ದಿ

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್​ ನಾಪತ್ತೆ ಪ್ರಕರಣ : ನೇತ್ರಾವತಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ

ರಾಜ್ಯ(ಮಂಗಳೂರು)ಜು.30:-  ಮಾಜಿ ಸಿಎಂ ಎಸ್​.ಎಂ. ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್​ ಅವರು ನೇತ್ರಾವತಿ ನದಿಗೆ ಹಾರಿರುವ ಶಂಕೆಯಲ್ಲಿ ಅಗ್ನಿಶಾಮಕ ದಳ, ಪೊಲೀಸ್​ ಸಿಬ್ಬಂದಿ ಮತ್ತು ಮುಳುಗು ತಜ್ಞರು ನೇತ್ರಾವತಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಉಳ್ಳಾಲ ಬಳಿಯ ನೇತ್ರಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಶವ ಪತ್ತೆ ಕಾರ್ಯಕ್ಕೆ ಸ್ವಲ್ಪ ಅಡ್ಡಿಯುಂಟಾಗಿದೆ ಎನ್ನಲಾಗುತ್ತಿದೆ.  ತಣ್ಣೀರುಬಾವಿಯಲ್ಲಿನ ಮುಳುಗು ತಜ್ಞರು ಬಿಟ್ಟೂ ಬಿಡದಂತೆ ಶೋಧ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಸೋಮವಾರ ಮಂಗಳೂರಿಗೆ ತೆರಳಲು ಮುಂದಾಗಿದ್ದ ಸಿದ್ಧಾರ್ಥ ಅವರು ತೊಕ್ಕೊಟ್ಟು ಸೇತುವೆ ಬಳಿ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿ ಮೊಬೈಲ್​ ​ನಲ್ಲಿ ಮಾತನಾಡುತ್ತಾ ಸೇತುವೆಯ ಮಧ್ಯಭಾಗಕ್ಕೆ ತೆರಳಿ ನಂತರ ಕಣ್ಮರೆಯಾಗಿದ್ದರು. ಚಾಲಕ ತುಂಬಾ ಹೊತ್ತು ಕಾದ ಬಳಿಕ ಅವರ ಮೊಬೈಲ್​ ​ಗೆ ಕರೆ ಮಾಡಿದಾಗ, ಅದು ಸ್ವಿಚ್​ಆಫ್​ ಆಗಿತ್ತು. ತಕ್ಷಣವೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ.

ಮೊಬೈಲ್​ಫೋನ್ ​ನ ಲೊಕೇಷನ್​ ಟ್ರೇಸ್​ ಮಾಡಿದಾಗ ಅದು ನದಿಯ ಮಧ್ಯಭಾಗದಲ್ಲಿ ತೋರಿಸುತ್ತಿತ್ತು. ಹಾಗಾಗಿ ಸಿದ್ಧಾರ್ಥ ಅವರು ನದಿಗೆ ಹಾರಿರುವ ಶಂಕೆಯಲ್ಲಿ ಶೋಧಿಸಲಾಗುತ್ತಿದೆ. ಹಿರಿಯ ಪೊಲೀಸ್​​ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಶೋಧ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: