ಮೈಸೂರು

ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿಯನ್ನು ನಡೆಸಲ್ಲ : ಶಾಸಕ ಎಸ್.ಎ.ರಾಮದಾಸ್

ಮೈಸೂರು,ಜು.31:- ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿಯನ್ನು ನಡೆಸಲ್ಲ, ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆಯ ವೇಳೆ ವರಿಷ್ಠರು ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ತಿ.ಮರಸೀಪುರ ತಾಲೂಕಿನ ಸೋಸಲೆ ಗ್ರಾಮದಲ್ಲಿರುವ ಶ್ರೀ ಹೊನ್ನಾದೇವಿ ಅಮ್ಮನವರ ದೇವಾಲಯಕ್ಕೆ ನಿನ್ನೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಚಿವ ಸ್ಥಾನಕ್ಕಾಗಿ ಲಾಬಿಯನ್ನೇನು ಆರಂಭಿಸಿಲ್ಲ. ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮುಂದಿನ ಬಿಜೆಪಿ ಸರ್ಕಾರದಲ್ಲಿ ರಾಮದಾಸ್ ಇರುತ್ತಾರೆ ಎಂಬ ಮಾತನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿದ್ದರು ಎಂದು ಸಂಪುಟದಲ್ಲಿ ಅವಕಾಶವಿರುವ ವಿಶ್ವಾಸವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಕೆ.ಆರ್.ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಟಿಕೇಟನ್ನು ಕೇಳಿರಲಿಲ್ಲ. ಬಿಜೆಪಿಯ ವರಿಷ್ಠರೇ ಕರೆದು ಸ್ಪರ್ಧಿಸಲಿಕ್ಕೆ ಅವಕಾಶ ಮಾಡಿಕೊಟ್ಟರು. ಹಿಂದಿನ ಸರ್ಕಾರದಲ್ಲಿಯೂ ಆರಂಭದಲ್ಲಿ ನಿರಾಕರಿಸಿ ನಂತರ ಸಚಿವ ಸಂಪುಟದಲ್ಲಿ ಸ್ಥಾನವನ್ನು ನೀಡಿ, ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಕೊಟ್ಟಿದ್ದರು. ಪಕ್ಷದ ವರಿಷ್ಠರು ಸೂಚನೆಗಳನ್ನು ಶ್ರೀರಾಮನಂತೆ ಪಾಲಿಸುತ್ತೇನೆ. ಆದರೆ ಕಾಡಿಗೆ ಹೋಗದೆ ನಾಡಿನಲ್ಲಿಯೇ ಇದ್ದಕೊಂಡು ಜನರ ಕೆಲಸ ಹಾಗೂ ಪಕ್ಷದ ಸಂಘಟನೆಯನ್ನು ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನೂತನ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ರಚನೆ ಬಿರುಸುಗೊಂಡಿರುವ ಹಿನ್ನಲೆಯಲ್ಲಿ ಮಾಜಿ ಸಚಿವರಾದ ಶಾಸಕ ಎಸ್.ಎ.ರಾಮದಾಸ್ ಅವರು ಮನೆ ದೇವರಾದ ಸೋಸಲೆ ಶ್ರೀ ಹೊನ್ನಾದೇವಿ ಅಮ್ಮನವರ ದರ್ಶನ ಪಡೆದು ಪೂಜೆ ಸಲ್ಲಿಸಿ, ಅರ್ಧ ತಾಸುಗಳ ಕಾಲ ಪ್ರಾರ್ಥಿಸಿದರು. ನಂತರ ದೇವಾಲಯದ ಅರ್ಚಕರಾದ ಆರ್.ಮಹದೇವಸ್ವಾಮಿ, ರಾಜಪ್ಪ ಹಾಗೂ ಮಲ್ಲೇಶ ಅವರು ಶಾಸಕರನ್ನು ಸನ್ಮಾನಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಪರಶಿವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣ ನಿಂಗಯ್ಯ, ಸದಸ್ಯರಾದ ಎ.ನಾಗರಾಜು(ಪಾಪು), ಪುಟ್ಟಸ್ವಾಮಿ, ಶಿವು, ಮಾಜಿ ಅಧ್ಯಕ್ಷ ಬಿ.ಎಸ್.ಲೋಕೇಶ್, ತಾಲೂಕು ಗಾಣಿಗರ ಸಂಘದ ಗೌರವಾಧ್ಯಕ್ಷ ಎಸ್.ಮಹದೇವಶೆಟ್ಟಿ, ದೈಹಿಕ ಶಿಕ್ಷಕ ಪೃಥ್ವೀಸ್, ಮುಖಂಡರಾದ ಎನ್.ನಿಂಗಯ್ಯ, ಚಿಕ್ಕೀರಯ್ಯ, ನಿಂಗರಾಜು, ಎಂ.ರಾಜು, ಜವರಯ್ಯ, ಕಿಶೋರ್‍, ಶಶಿ ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: