ಮೈಸೂರು

ಕೃಷಿ ಉತ್ಪನ್ನದ ಮಾರಾಟದ ಹಣವನ್ನು ಬ್ಯಾಂಕ್ ರೈತರ ಸಾಲಕ್ಕೆ ಜಮಾ ಮಾಡಬಾರದು : ಡಿ.ರಂದೀಪ್ ಸೂಚನೆ

ರೈತರ ಬ್ಯಾಂಕ್ ಖಾತೆಗೆ ಬರುವ ಕೃಷಿ ಉತ್ಪನ್ನ ಮಾರಾಟದ ಹಣ ಹಾಗೂ ಬೆಳೆ ಪರಿಹಾರದ ಹಣವನ್ನು ಬ್ಯಾಂಕುಗಳು ಬಲವಂತವಾಗಿ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಸೂಚಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಕರೆದಿದ್ದ ರೈತರ ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,  ಕಬ್ಬು ಮಾರಾಟದ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಈ ಹಣವನ್ನು ಬ್ಯಾಂಕುಗಳು ರೈತರ ಸಾಲಕ್ಕೆ ಹೊಂದಿಸಿಕೊಳ್ಳುತ್ತಿವೆ. ಇದರಿಂದ ರೈತರಿಗೆ ಕೃಷಿ ಉತ್ಪನ್ನದ ಹಣ ಸಿಗುತ್ತಿಲ್ಲ. ರೈತ ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ ಎಂದು ರೈತ ಮುಖಂಡರು ಹೇಳಿದಾಗ, ಅಂತಹ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.

ಸುಮಾರು 4 ಸಾವಿರ ಕೋಟಿ ರೂ.ಗಳ ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಕೇಳಿತ್ತು. ಕೇಂದ್ರದಿಂದ 1742 ಕೋಟಿ ರೂ.ಗಳು ರಾಜ್ಯಕ್ಕೆ ಹಂಚಿಕೆಯಾಗಿದ್ದು, ಈಗ 450 ಕೋಟಿ ರೂ.ಗಳು ಬಿಡುಗಡೆಯಾಗಿದೆ ಎಂಬ ಮಾಹಿತಿ ಇದೆ. ಭೂಮಿ ಸಾಫ್ಟ್ ವೇರ್ ನಲ್ಲಿ ಹಾಗೂ ಆಧಾರ್ ಡೆಟಾ ಬೇಸ್‍ನಲ್ಲಿರುವ ಮಾಹಿತಿಯನ್ನು ತಾಳೆ ನೋಡಿ, ಹೊಂದಾಣಿಕೆ ಇರುವ ರೈತರಿಗೆ ಪರಿಹಾರ ಹಣ ನೀಡಲಾಗುವುದು ಎಂದರು.

ಈ ಡೆಟಾ ಬೇಸ್‍ನಲ್ಲಿ 1.51 ಲಕ್ಷ ನೋಂದಣಿಯ ಗುರಿ ಇದೆ. ಈವರೆಗೆ 1.20 ಲಕ್ಷ ನೋಂದಣಿಯಾಗಿದೆ. ಈ ಪೈಕಿ 20 ಸಾವಿರ ನೋಂದಣಿ ಹೊಂದಾಣಿಕೆ ಆಗುತ್ತಿಲ್ಲ. 1 ಲಕ್ಷ ನೋಂದಣಿ ಸರಿ ಇದೆ. ಅವರಿಗೆ ಬೆಳೆ ಪರಿಹಾರದ ಹಣ ನೀಡಲು ಸಮಸ್ಯೆ ಇಲ್ಲ ಎಂದರು.

ಕೃಷಿಯಲ್ಲಿ ಪ್ರತಿ ಹೆಕ್ಟೇರ್‍ಗೆ 6800 ರೂ.ಗಳು ಪರಿಹಾರ ನೀಡಬಹುದಾಗಿದೆ. ಇದು ನೀರಾವರಿಯಾಗಿದ್ದರೆ ಇದರ ಎರಡು ಪಟ್ಟು ಪರಿಹಾರ ಸಿಗುತ್ತದೆ. ತೋಟಗಾರಿಕೆಯಲ್ಲಿ ನೀರಾವರಿ ಕ್ಷೇತ್ರದಲ್ಲಿ ಪ್ರತಿ ಹೆಕ್ಟೇರ್‍ಗೆ 18 ಸಾವಿರ, ಮಳೆಯಾಶ್ರಿತ ಪ್ರದೇಶಕ್ಕೆ 13 ಸಾವಿರ ಪರಿಹಾರ ಸಿಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬೆಳೆ ಪರಿಹಾರದ ಜೊತೆಗೆ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ನೋಂದಾಯಿಸಿದವರಿಗೆ ಹೆಚ್ಚಿನ ಪರಿಹಾರ ಸಿಗುತ್ತದೆ. ಆದ್ದರಿಂದ ಹೆಚ್ಚಿನ ಪ್ರಚಾರ ನೀಡಲಾಗಿದ್ದು, 33 ಸಾವಿರಕ್ಕೂ ಹೆಚ್ಚು ನೋಂದಣಿಯಾಗಿದೆ ಎಂದು ತಿಳಿಸಿದರು.

ಬೆಳೆ ವಿಮೆಗೆ ಸಂಬಂಧಿಸಿದಂತೆ ಒಂದೊಂದು ಪ್ರದೇಶಕ್ಕೆ ಬೇರೆ ಬೇರೆ ಬೆಳೆಗಳ ವಿಮೆ ಮಾಡಿಸಲು  ಅಧಿಸೂಚನೆ ಮಾಡಲಾಗಿರುತ್ತದೆ. ಅಧಿಸೂಚನೆಯಲ್ಲಿ ಇಲ್ಲದ ಬೆಳೆ ಬೆಳೆದ ರೈತರ ನಷ್ಟಕ್ಕೆ ಪರಿಹಾರ ಸಿಗುವುದಿಲ್ಲ. ಆದ್ದರಿಂದ ನಿರ್ದಿಷ್ಟ ಬೆಳೆಯ ನಿರ್ಬಂಧವನ್ನು ತೆಗೆಯಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಹೇಳಿದರು.

ಭಿತ್ತನೆ ಬೀಜ ಕೊಡುವಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ವಿಮೆ ಕಂತು ಪಡೆದುಕೊಂಡರೆ, ರೈತರು ವಿಮೆ ನೋಂದಣಿಗೆ ಬ್ಯಾಂಕ್‍ಗಳಿಗೆ ಅಲೆಯುವುದು ತಪ್ಪುತ್ತದೆ. ಕಬ್ಬು ಮತ್ತು ರೇಷ್ಮೆಯನ್ನು ವಿಮೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ಬೆಳೆಗಳನ್ನು ಸೇರಿಸಬೇಕು ಎಂದು ರೈತರು ಸಲಹೆ ನೀಡಿದರು.

ಕಬ್ಬಿನ ಇಳುವರಿಯ ಆಧಾರದ ಮೇಲೆ ಬೆಲೆ ನಿಗದಿಯಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ ಶೇ.10.5 ರಿಂದ ಶೇ.11ರಷ್ಟು ಇಳುವರಿ ಬರುತ್ತಿತ್ತು. ಈಗ ಶೇ. 8.9ರಷ್ಟು ತೋರಿಸಲಾಗುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಒಂದೇ ಕಾರ್ಖಾನೆ ಮೈಸೂರಿನಲ್ಲಿ ಎರಡು ರೀತಿಯ ದರ ನೀಡುತ್ತಿದೆ. ಒಂದು ಕಡೆ 2500 ರೂ. ನೀಡಿದರೆ ಮತ್ತೊಂದು ಕಾರ್ಖಾನೆಯಲ್ಲಿ 2300 ರೂ. ನೀಡಲಾಗುತ್ತಿದೆ. ಈ ತಾರತಮ್ಯ ಹೋಗಬೇಕು ಎಂದು ರೈತರು ಹೇಳಿದರು.

ಮೂರು ವರ್ಷದ ಅಂಕಿ ಅಂಶಗಳನ್ನು ಪಡೆದು, ಸಕ್ಕರೆ ಆಯೋಗದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕಾ. ರಾಮೇಶ್ವರಪ್ಪ, ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಹೊಸಕೋಟೆ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: