ಕರ್ನಾಟಕದೇಶಪ್ರಮುಖ ಸುದ್ದಿ

ಜೈಲು ಸೇರಿದ ಶಶಿಕಲಾ ಕೈದಿ ನಂ.9234, ಎ-ಗ್ರೇಡ್‍-ಸೆಲ್ ಬೇಡಿಕೆ ತಿರಸ್ಕಾರ; ಮನೆ ಊಟವೂ ಇಲ್ಲ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎಂದು ಸುಪ್ರೀಂಕೋರ್ಟ್‍ನಿಂದ ಘೋಷಣೆಯಾದ ಕಾರಣ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ನಟರಾಜನ್, ಸಂಬಂಧಿಗಳಾದ ವಿ.ಎನ್. ಸುಧಾಕರನ್, ಇಳವರಸಿ ಅವರು ಇಂದು (ಫೆ.15) ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಶರಣಾದರು.

ಇದಕ್ಕೂ ಮೊದಲು ಶಶಿಕಲಾ ಶರಣಾಗಲು ಅವರ ಆರೋಗ್ಯ ಸರಿಯಿಲ್ಲವೆಂಬ ಕಾರಣ ನೀಡಿ ಅವರ ಪರ ವಕೀಲರು ಕಾಲಾವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್‍ ನ್ಯಾಯಮೂರ್ತಿ ಪಿನಾಕಿ ಚಂದ್ರಘೋಷ್ ಅವರು ಈ ಅರ್ಜಿಯನ್ನು ತಿರಸ್ಕರಿಸಿ, ವಿಶೇಷ ನ್ಯಾಯಾಲಯಕ್ಕೆ ತಕ್ಷಣ ಶರಣಾಗುವಂತೆ ಸೂಚಿಸಿದ್ದರು.

ಶರಣಾಗತಿಗಾಗಿಯೇ ವಿಶೇಷ ನ್ಯಾಯಾಲಯವನ್ನು ಪರಪ್ಪನ ಅಗ್ರಹಾರ ಜೈಲಿನ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು.

ಚೆನ್ನೈನಲ್ಲಿ ಬೆಳಗ್ಗೆ “ಜಯಾ-ಎಂಜಿಆರ್” ಸಮಾಧಿಗಳಿಗೆ ನಮಸ್ಕರಿ ಶಪಥಗೈದ ಶಶಿಕಲಾ, ಸಂಜೆ 5.30ರ ಸಮಯಕ್ಕೆ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರಾದರು. ಇವರ ಜೊತೆ ಸಂಬಂಧಿ ಹಾಗೂ ಪ್ರಕರಣದಲ್ಲಿ 4ನೇ ಅಪರಾಧಿಯಾಗಿರುವ ಇಳವರಸಿ ಕೂಡ ನ್ಯಾಯಾಧೀಶರಾದ ಅಶ್ವತ್ಥನಾರಾಯಣ್ ಅವರ ಮುಂದೆ ಕೋರ್ಟ್ ಹಾಲ್ ಸಂಖ್ಯೆ 48ರಲ್ಲಿ ಶರಣಾದರು.

ಮುಂದಿನ ಪ್ರಕ್ರಿಯೆ ನಡೆಸಿದ ನ್ಯಾಯಾಧೀಶರು ಬಳಿಕ ಅಪರಾಧಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸುವಂತೆ ಸೂಚಿಸಿದರು.

ವಿ.ಎನ್. ಸುಧಾಕರನ್ ವಿಳಂಬ ಹಾಜರಿ:

ಮೂವರೂ ಅಪರಾಧಿಗಳೂ ಒಟ್ಟಿಗೆ ಹಾಜರಾಗಬೇಕಿತ್ತಾದರೂ ಪ್ರಕರಣದಲ್ಲಿನ 3ನೇ ಅಪರಾಧಿ ವಿ.ಎನ್. ಸುಧಾಕರನ್‍ ಹಾಜರಾಗುವುದು ವಿಳಂಬವಾಯಿತು. ಮೊದಲು ಹಾಜರಾದ ಶಶಿಕಲಾ ಮತ್ತು ಇಳವರಸಿ ಅವರು ಸುಧಾಕನ್ ಟ್ರಾಫಿಕ್‍ನಲ್ಲಿ ಸಿಕ್ಕಿಕೊಂಡಿದ್ದಾರೆ. ಇನ್ನರ್ಧ ಗಂಟೆಯಲ್ಲಿ ಅವರು ಹಾಜರಾಗುತ್ತಾರೆ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಅಸಮಾಧಾನದಿಂದಲೇ ನ್ಯಾಯಾಧೀಶರು ಸಮ್ಮತಿಸಿದರು.

ಶಶಿಕಲಾ ಮತ್ತು ಇಳವರಸಿ ಅವರನ್ನು ಜೈಲಿಗೆ ಕಳುಹಿಸುವ ವಿಧಿವಿಧಾನ ಮುಗಿದಾಗ 3ನೇ ಸುಧಾಕರನ್ ಕೂಡ ನ್ಯಾಯಾಲಯದ ಎದುರು ಹಾಜರಾದರು. ಅವರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಯಿತು.

ಎ-ಗ್ರೇಡ್-ಸೆಲ್‍ ಮನವಿ ತಿರಸ್ಕಾರ; ಮನೆ ಊಟವೂ ಇಲ್ಲ:

ನ್ಯಾಯಾಲಯದ ಮುಂದೆ ಹಾಜರಾದ ಶಶಿಕಲಾ, ಎ-ಗ್ರೇಡ್‍-ಸೆಲ್‍ ವ್ಯವಸ್ಥೆ ನೀಡುವಂತೆ ಮತ್ತು ತನಗೆ ಸಕ್ಕರೆ ಕಾಯಿಲೆ ಇರುವುದಿಂದ ಮನೆಯಿಂದ ಊಟ ತರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆದರೆ ಈ ಮನವಿಯನ್ನು ನ್ಯಾಯಾಧೀಶರು, ಸಾಮಾನ್ಯ ಸೆಲ್‍ನಲ್ಲಿಯೇ ಇರಬೇಕು, ಜೈಲಿನಲ್ಲಿ ನೀಡುವ ಊಟವನ್ನೇ ಮಾಡಬೇಕು ಎಂದು ಆದೇಶವಿತ್ತರು.

ಶಶಿಕಲಾಗೆ ಜೈಲಿನಲ್ಲಿ ಕ್ಯಾಂಡಲ್ ತಯಾರಿಸುವ ಕೆಲಸ ನೀಡಲಾಗಿದ್ದು, ದಿನಕ್ಕೆ 50 ರೂ. ಕೂಲಿ ನೀಡಲಾಗುವುದು. ಉಡಲು 3 ಬಿಳಿ ಸೀರೆ, ಊಟಕ್ಕಾಗಿ ಒಂದು ತಟ್ಟೆ, ನೀರು ಕುಡಿಯಲು ಒಂದು ಲೋಟ ಮತ್ತು ಚಂಬು ನೀಡಲಾಗುವುದು.

ಇನ್ನೇನು ಮುಖ್ಯಮಂತ್ರಿಯಾಗೇಬಿಟ್ಟರು ಎಂಬಂತಹ ಸ್ಥಿತಿಯಲ್ಲಿದ್ದ ಶಶಿಕಲಾ ಈ ರೀತಿ ನ್ಯಾಯಾಲಯದಿಂದ ಶಿಕ್ಷೆಗೀಡಾಗಿ ಜೈಲು ಸೇರಿರುವುದು “ಮಾಡಿದ್ದುಣ್ಣೋ ಮಹರಾಯ” ಎಂಬ ಗಾದೆ ಮಾತನ್ನು ನೆನಪಿಸುವಂತಿತ್ತು.

Leave a Reply

comments

Related Articles

error: