ಪ್ರಮುಖ ಸುದ್ದಿ

ಏಕಮುಖ ಸಂಚಾರ ಸಮಸ್ಯೆ : ಡಿಸಿ, ಎಸ್‍ಪಿಗೆ ಮನವಿ ಸಲ್ಲಿಸಿದ ವರ್ತಕರು

ರಾಜ್ಯ(ಮಡಿಕೇರಿ) ಆ.1 :- ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ ನಂತರ ಕೈಗಾರಿಕಾ ಬಡಾವಣೆಯಲ್ಲಿ ಆರಂಭಿಸಿರುವ ಏಕಮುಖ ಸಂಚಾರ ವ್ಯವಸ್ಥೆಯಿಂದ ಸಮಸ್ಯೆಗಳು ಎದುರಾಗಿದೆ ಎಂದು ಈ ಭಾಗದ ವರ್ತಕರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ಭೇಟಿಯಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ
ಪೀಪಲ್ಸ್ ಮೂವ್‍ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರ ನೇತೃತ್ವದಲ್ಲಿ ಡಿಸಿ ಹಾಗೂ ಎಸ್‍ಪಿಯನ್ನು ಭೇಟಿಯಾದ ವರ್ತಕರು ಏಕಮುಖ ಸಂಚಾರ ವ್ಯವಸ್ಥೆಯ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದರು.
ಮಡಿಕೇರಿಯ ಕೈಗಾರಿಕಾ ಬಡಾವಣೆ ರಸ್ತೆಯಲ್ಲಿ ಮೊದಲಿನಿಂದಲೂ ಕೊಹಿನೂರು ರಸ್ತೆಯಿಂದ ಪ್ರೆಸ್‍ಕ್ಲಬ್ ಕಡೆಗೆ ವಾಹನಗಳು ಸಂಚರಿಸುತ್ತಿದ್ದವು. ಇದರಿಂದಾಗಿ ಕೈಗಾರಿಕಾ ಬಡಾವಣೆಯಲ್ಲಿರುವ ವ್ಯಾಪಾರಸ್ಥರಿಗೆ, ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗರಿಗೆ ಹಾಗೂ ನಾಗರೀಕರಿಗೆ ಅನುಕೂಲಕರ ವಾತಾವರಣವಿತ್ತ್ತು. ಆದರೆ ಇತ್ತೀಚಿಗೆ ಈ ಏಕಮುಖ ಸಂಚಾರವನ್ನು ಬದಲಾಯಿಸಿ ಪತ್ರಿಕಾ ಭವನದಿಂದ ಕೊಹಿನೂರು ರಸ್ತೆ ಕಡೆಗೆ ವಾಹನ ಸಂಚಾರ ಸಂಚರಿಸುವಂತೆ ಮಾಡಲಾಗಿದ್ದು, ಇದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿದೆ.
ಕೆಎಸ್‍ಆರ್‍ಟಿಸಿ ಬಸ್ಸ್ ನಿಲ್ದಾಣದ ಕಡೆಯಿಂದ ಪ್ರಯಾಣಿಸುವಾಗ ವಾಹನಗಳಿಗೆ ಕೊಹಿನೂರು ರಸ್ತೆಯಲ್ಲಿ ಬಲ ತಿರುವು ಇಲ್ಲ. ಎಡಕ್ಕೆ ಚಲಿಸಿದಾಗ ಗೌಳಿಬೀದಿಯ ಎಲ್ಲಾ ರಸ್ತೆಗಳು ಕಿರಿದಾಗಿದ್ದು, ಪ್ರವಾಸಿ ವಾಹನಗಳು ಇನ್ನಿತರ ವಾಹನಗಳಿಗೆ ಚಲಿಸಲು ತುಂಬಾ ತೊಂದರೆಯಾಗುತ್ತಿದೆ ಮತ್ತು ಪ್ರವಾಸಿ ವಾಹನಗಳು ಯಾವ ಕಡೆಗೆ ಹೋಗಬೇಕೆಂದು ತಿಳಿಯದೆ ಪ್ರತಿ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸಿ ಪ್ರವಾಸಿತಾಣಗಳ ಮಾರ್ಗದ ಬಗ್ಗೆ ವಿಚಾರಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಇತರ ವಾಹನ ಚಾಲಕರು ಹಾಗೂ ಪಾದಾಚಾರಿಗಳು ಪರದಾಡುವಂತಾಗಿದೆ.
ಸ್ಥಳೀಯ ಪ್ರಯಾಣಿಕರು, ವಯಸ್ಸಾದವರು ಖಾಸಗಿ ಬಸ್ಸಿನಲ್ಲಿ ಆಸನ ಹಿಡಿಯ ಬೇಕಾದರೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಕಡೆಯಿಂದ ಹೋಗಲು ಆಟೋರಿಕ್ಷಾಗಳಿಗೆ ಅತೀ ಹೆಚ್ಚು ಹಣ ನೀಡಬೇಕಾಗಿದೆ.
ಆದುದರಿಂದ ಈ ಹಿಂದೆ ಇದ್ದಂತೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಕೊಹಿನೂರು ರಸ್ತೆಯಿಂದ ಪತ್ರಿಕಾ ಭವನದ ಕಡೆಗೆ ಮಾಡುವುದು ಸೂಕ್ತ ಎಂದು ಹರೀಶ್ ಜಿ.ಆಚಾರ್ಯ ಹಾಗೂ ವರ್ತಕರು ಮನವರಿಕೆ ಮಾಡಿಕೊಟ್ಟರು.
ಖಾಸಗಿ ಬಸ್ ಮೊದಲಿನಂತೆ ಕಾವೇರಿಹಾಲ್ ಮೂಲಕ ಕಾಲೇಜು ರಸ್ತೆಗೆ ಬಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರದಿಂದ ಕೊಹಿನೂರು ರಸ್ತೆಗೆ ಬಂದು ಮುಂದಕ್ಕೆ ಪ್ರಯಾಣಿಸಿದಾಗ ಸಾರ್ವಜನಿಕರಿಗೆ, ಕೈಗಾರಿಕಾ ಬಡಾವಣೆಯವರಿಗೆ, ಪ್ರವಾಸಿಗರಿಗೆ, ವ್ಯಾಪಾರಸ್ಥರಿಗೆ ಅಲ್ಲದೆ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವವರೆಲ್ಲರಿಗೂ ಅನುಕೂಲವಾಗುತ್ತದೆ.
ನೂತನ ಖಾಸಗಿ ಬಸ್ ನಿಲಾಣದಿಂದ ಕಾಲೇಜು ರಸ್ತೆಗೆ ತೆರಳುವಾಗ ಕಾವೇರಿ ಹಾಲ್‍ನ ಎದುರು ಯಾವುದೇ ವಾಹನಗಳಿಗೂ ನಿಲುಗಡೆಗೆ ಅವಕಾಶ ನೀಡಬಾರದು, ಒಂದು ವೇಳೆ ನಿಲುಗಡೆಗೆ ಅವಕಾಶ ನೀಡಿದರೆ ಬಸ್ ಚಾಲಕರಿಗೆ ಕಷ್ಟವಾಗುತ್ತದೆ.
ಕಾಲೇಜು ರಸ್ತೆಯಲ್ಲಿ ಮೋರ್ ಎದುರಿನ ದ್ವಿಚಕ್ರ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ಬದಲಾಯಿಸಿ ಆ ಜಾಗದಲ್ಲಿ ಆಟೋರಿಕ್ಷಾಗಳನ್ನು ಪಾರ್ಕ್ ಮಾಡುವಂತಾಗಬೇಕು. ಆಗ ಕಾಲೇಜು ರಸ್ತೆ ಮೂಲಕ ಬಂದ ಬಸ್‍ಗಳಿಗೆ ಸ್ಟೆಂಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ ಸುಲಲಿತವಾಗಿ ತಿರುವು ಪಡೆಯಲು ಅನುಕೂಲವಾಗುತ್ತದೆ. ಈ ಪರಿವರ್ತನೆಯಿಂದ ಎಲ್ಲಾ ಸಮಸ್ಯೆಗಳು ಬಗೆ ಹರಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಪೂಜಾ ಎಂಟರ್ ಪ್ರೈಸಸ್‍ನ ಮಾಲೀಕ ಕ್ಲೆಮೆಂಟ್ ರೈಗೊ, ಪ್ರಶಾಂತ್ ಫರ್ನಿಚರ್ಸ್‍ನ ಮಾಲೀಕ ಪ್ರಶಾಂತ್ ಸೇರಿದಂತೆ ಈ ಭಾಗದ ಇತರ ವರ್ತಕರು ಹಾಗೂ ಸಿಬ್ಬಂದಿ ವರ್ಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: