ವಿದೇಶ

ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಕೇರಳ ಯುವಕನ ಮೃತ್ಯು

ಕಾಬೂಲ್,ಆ.1- ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಕೇರಳದ ಯುವಕ ಮೃತಪಟ್ಟಿರುವ ಘಟನೆ ಅಪ್ಘಾನಿಸ್ತಾನದ ನಂಗ್ರಹಾರ್ ಪ್ರಾಂತ್ಯದಲ್ಲಿ ನಡೆದಿದೆ.

ದಾಳಿಯಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಾಲ್ ಪಟ್ಟಣದ ಮುಹಮ್ಮದ್ ಮುಹ್ಸಿನ್ ಮೃತಪಟ್ಟಿದ್ದಾನೆ. ಮುಹ್ಸಿನ್ ಜತೆಗೆ ಪಾಕಿಸ್ತಾನಿ ಐಎಸ್ ಕಮಾಂಡರ್ ಹುಝೈಫಾ ಕೂಡಾ ಹತನಾಗಿದ್ದಾನೆ. ಈ ವಿಚಾರವನ್ನು ಅಮೆರಿಕಾದ ಬೇಹುಗಾರಿಕೆ ಇಲಾಖೆ ದೃಢಪಡಿಸಿದೆ.

ಈತ ಡಯೇಷ್ ಸಂಘಟನೆಗೆ ಭಾರತದಿಂದ ಆನ್‌ಲೈನ್ ಮೂಲಕ ನೇಮಕ ಮಾಡಿಕೊಳ್ಳುತ್ತಿದ್ದ ಎಂದು ತಿಳಿಸಿದೆ. ಕೇರಳ ಪೊಲೀಸರು ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳ ಪ್ರಕಾರ, ಮುಹ್ಸಿನ್ ಸಾವಿನ ಬಗ್ಗೆ ಜು.23ರಂದು ಅಪ್ಘಾನಿಸ್ತಾನದ ದೂರವಾಣಿ ಸಂಖ್ಯೆಯಿಂದ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಜೂನ್ 15ರವರೆಗೆ 40 ಮಂದಿ ಪುರುಷರು, 21 ಮಹಿಳೆಯರು ಮತ್ತು 37 ಮಕ್ಕಳು ಸೇರಿ 98 ಮಂದಿ ಅಪ್ಘಾನಿಸ್ತಾನದಲ್ಲಿ ಐಎಸ್‌ನ ಭಾಗವಾಗಿದ್ದಾರೆ. ಈ ಪೈಕಿ 39 ಮಂದಿ ಇಸ್ಲಾಮಿಕ್ ಉಗ್ರ ಚಟುವಟಿಕೆಗಳ ವೇಳೆ ಬಲಿಯಾಗಿದ್ದಾರೆ. ಹಾಲಿ ಇರುವ 59 ಮಂದಿಯಲ್ಲಿ ಬಹುತೇಕ ಮಂದಿ ಮಕ್ಕಳು ಸೇರಿದ್ದು, ಇವರಲ್ಲಿ ಬಹಳಷ್ಟು ಮಂದಿ ಪಶ್ಚಿಮ ಏಷ್ಯಾ ಮಾರ್ಗದ ಮೂಲಕ ಅಪ್ಘಾನಿಸ್ತಾನಕ್ಕೆ ತಮ್ಮ ಕುಟುಂಬದ ಜತೆ ತೆರಳಿದ್ದರು ಎಂದು ಮೂಲಗಳು ಹೇಳಿವೆ. ಈ ಕುಟುಂಬಗಳು ಪೂರ್ವ ಅಪ್ಘಾನಿಸ್ತಾನ ಪ್ರಾಂತ್ಯಗಳಲ್ಲಿ ವಾಸವಿದ್ದರು ಎಂದು ತಿಳಿಸಿದೆ. (ಎಂ.ಎನ್)

 

 

Leave a Reply

comments

Related Articles

error: