
ದೇಶಪ್ರಮುಖ ಸುದ್ದಿ
ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಹಾಗೂ ಕುಟುಂಬಕ್ಕೆ ಸಿಆರ್ ಪಿಎಫ್ ಭದ್ರತೆ: ಸುಪ್ರೀಂ ಆದೇಶ
ನವದೆಹಲಿ,ಆ.1-ಉನ್ನಾವೋ ಅತ್ಯಾಚಾರ ಸಂತ್ರಸ್ತೆ, ಆಕೆಯ ಕುಟುಂಬ ಮತ್ತು ವಕೀಲರಿಗೆ ತಕ್ಷಣ ಸಿಆರ್ ಪಿಎಫ್ ರಕ್ಷಣೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಅಲ್ಲದೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಉತ್ತರ ಪ್ರದೇಶದಿಂದ ದಿಲ್ಲಿಗೆ ವರ್ಗಾಯಿಸಿ ತೀರ್ಪು ನೀಡಿದೆ. ಇದರಿಂದ ಆದಿತ್ಯನಾಥ್ ಸರ್ಕಾರಕ್ಕೆ ಮುಖಭಂಗವಾಗಿದೆ.
ಕಾರು ಅಪಘಾತ ಪ್ರಕರಣದ ತನಿಖೆಯನ್ನು 7 ದಿನಗಳಲ್ಲಿ, ಅತ್ಯಾಚಾರ ಪ್ರಕರಣದ ತನಿಖೆಯನ್ನು 45 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸೂಚಿಸಿದ್ದಾರೆ.
ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಸಂತ್ರಸ್ತೆಗೆ ಮಧ್ಯಂತರ ಪರಿಹಾರ ಒದಗಿಸುವ ಕುರಿತಾದ ಪ್ರಶ್ನೆಯನ್ನು ಕೂಡ ನಾವು ಪರಿಗಣಿಸುತ್ತಿದ್ದೇವೆ ಎಂದು ನ್ಯಾಯಾಲಯ, ಆಕೆಗೆ ಉತ್ತರ ಪ್ರದೇಶ ಸರ್ಕಾರವು 25 ಲಕ್ಷ ರೂಪಾಯಿಯನ್ನು ಮಧ್ಯಂತರ ಪರಿಹಾರವಾಗಿ ನೀಡಬೇಕು ಎಂದಿದೆ. (ಎಂ.ಎನ್)