ದೇಶ

ಸರ್ಕಾರ ರಚಿಸಲು ಪಳನಿಸ್ವಾಮಿಗೆ ರಾಜ್ಯಪಾಲರ ಆಹ್ವಾನ: ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ

ಚೆನ್ನೈ: ತಮಿಳುನಾಡಿನಲ್ಲಿ ಉಂಟಾಗಿದ್ದ ರಾಜಕೀಯ ಹೈಡ್ರಾಮಾಗೆ ತೆರೆಬೀಳುವ ಲಕ್ಷಣಗಳು ಕಾಣಿಸಿವೆ. ಜಯಲಲಿತಾ ಮತ್ತು ಶಶಿಕಲಾ ಆಪ್ತನೆಂದೇ ಗುರುತಿಸಿಕೊಂಡ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿಕೊಡುವ ಮೂಲಕ ಬಿಕ್ಕಟ್ಟಿಗೆ ಮಂಗಳವಾಡಲು ರಾಜ್ಯಪಾಲರಾದ ವಿದ್ಯಾಸಾಗರ ರಾವ್ ಮುಂದಾಗಿದ್ದಾರೆ.

ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾಗ ತಮಗೆ ಬೆಂಬಲಿಸುವ ಶಾಸಕರ ಹೊಸ ಪಟ್ಟಿ ನೀಡುವಂತೆ ಪಳನಿಸ್ವಾಮಿ ಅವರಿಗೆ ಸೂಚಿಸಿದ್ದರು. ಅದರಂತೆ ಇಂದು 11.40ಕ್ಕೆ ರಾಜಭವನಕ್ಕೆ ಆಗಮಿಸಿದ ಪಳನಿಸ್ವಾಮಿ ಅವರು, ರಾಜ್ಯಪಾಲರ ಜೊತೆ ಮಹತ್ವದ ಮಾತುಕತೆ ನಡೆಸಿದರು. ತಮಗೆ ಬೆಂಬಲಿಸುವ 124 ಶಾಸಕರ ಸಹಿಯುಳ್ಳ ಹೊಸ ಪಟ್ಟಿಯನ್ನು ನೀಡಿ ಸರ್ಕಾರ ರಚನೆಗೆ ಅವಕಾಶ ಕೋರಿದರು.

ಈ ಮನವಿಯನ್ನು ಒಪ್ಪಿದ ರಾಜ್ಯಪಾಲರು, ಪಳನಿಸ್ವಾಮಿ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. ಇದರ ಜೊತೆಗೆ ತಮ್ಮ ಸರ್ಕಾರಕ್ಕಿರುವ ಬೆಂಬಲವನ್ನು ಸದನದಲ್ಲಿ ಸಾಬೀತುಪಡಿಸಲು ಪಳನಿಸ್ವಾಮಿ ಅವರಿಗೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ತಮಿಳುನಾಡಿನಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಎಡಪ್ಪಾಡಿ ಪಳನಿಸ್ವಾಮಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲರು ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಶಶಿಕಲಾ ಅವರೊಂದಿಗೆ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಪಳನಿಸ್ವಾಮಿ ಅವರು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಅವರನ್ನು ಭೇಟಿಯಾಗಲು ಆಗಮಿಸಲಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಕುರಿತು ಚೆನ್ನೈ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: