ಮೈಸೂರು

ಪ್ರಾಧ್ಯಾಪಕರ ಅಕ್ರಮ ನೇಮಕಾತಿ : ರದ್ದುಗೊಳಿಸಲು ಆಗ್ರಹ

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಮಂಕುಬೂದಿ ಎರಚಿದೆ.  ನೇಮಕಾತಿಯನ್ನು ಇಲಾಖೆಯು ತಕ್ಷಣವೇ ಕೈಬಿಡಬೇಕು ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ.ಹೆಚ್.ಸೋಮಶೇಖರ್ ಶಿವಮೊಗ್ಗಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ತಿದ್ದುಪಡಿ ತರದೇ, ನಾಮಕಾವಸ್ಥೆಯ ಮಾರ್ಪಾಡು ಮಾಡಿ ತಜ್ಞ ಸಮಿತಿ ಶಿಫಾರಸ್ಸನ್ನು ಗಾಳಿಗೆ ತೂರಿ ನಿಯಮಬಾಹಿರವಾಗಿ ನೇಮಕಾತಿ ನಡೆಸಲಾಗಿದೆ ಎಂದು ಇಲಾಖೆಯ ಕ್ರಮವನ್ನು ಖಂಡಿಸಿದ ಅವರು ರಾಜ್ಯಮಟ್ಟ ಉಪನ್ಯಾಸಕರ ಅರ್ಹತಾ ಪ್ರಶ್ನೆಪತ್ರಿಕೆಗಳಾದ ಸಾಮಾನ್ಯಜ್ಞಾನ ಇತಿಹಾಸ ಸೇರಿದಂತೆ ಹಲವಾರು ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ವೆಬ್‍ಸೈಟ್‍ಗಳಲ್ಲಿ ನಕಲು ಮಾಡಿದ್ದು ಕೀ ಉತ್ತರಗಳಲ್ಲಿಯೂ ಗೊಂದಲವಿದೆ ಎಂದರು. ಕೆಇಎ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡು, ನೇಮಕಾತಿಯನ್ನು ರದ್ದುಗೊಳಿಸಿ ತನಿಖೆಗೊಳಪಡಿಸಬೇಕು, ಅಲ್ಲಿಯವರೆಗೂ ಹುದ್ದೆಗಳ ನೇಮಕಾತಿ ಆದೇಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಡೆಹಿಡಿಯಬೇಕು. ಪಟ್ಟಿಯಲ್ಲಿರುವವರ ಮೂಲ ದಾಖಲೆಗಳನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆ : 2010ರ ನಿಯಮಾನುಸಾರ ವಯೋಮಿತಿ ಹಾಗೂ ಸೇವಾ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿ,ಆರ್ಥಿಕ ಇಲಾಖೆ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಿ, ಪ್ರಸಕ್ತ ಪ್ರಕಟಿಸಿರುವ ನೇಮಕಾತಿ ಆದೇಶವನ್ನು ಸರ್ಕಾರ ತಡೆ ಹಿಡಿಯಬೇಕು ಹಾಗೂ ಶೇ20ರಷ್ಟು ಮೀಸಲಾತಿಯನ್ನು ಕಲ್ಪಿಸಿ ಎಂದು ಆಗ್ರಹಿಸಲಾಗಿದೆ. ಬೇಡಿಕೆಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸದೇ ಹೋದಲ್ಲಿ ಮಾರ್ಚ್ ಮೊದಲ ವಾರ  ರಾಜ್ಯಭವನ ಛಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಎಚ್ಚರಿಸಿದೆ.

ಅತಿಥಿ ಉಪನ್ಯಾಸಕರ ರಾಜ್ಯ ಸಮಿತಿಯ ಡಾ.ಪ್ರದೀಪ್ ಕುಮಾರ್, ಕಾರ್ಯದರ್ಶಿ ನಾಗೇಂದ್ರ, ರಾಜೇಶ್ ಕುಮಾರ್ ಹಾಗೂ ಇತರರು ಹಾಜರಿದ್ದರು.

Leave a Reply

comments

Related Articles

error: