ಪ್ರಮುಖ ಸುದ್ದಿಮೈಸೂರು

ಆ.5-6ರಂದು ನಗರದಲ್ಲಿ ‘ಮತ್ತೆ ಕಲ್ಯಾಣ’ ಅಭಿಯಾನ

ಜಾಥಾ, ಚಿತ್ರಕಲಾ ಪ್ರದರ್ಶನ, ಸಾಮರಸ್ಯ ಸಹಪಂಕ್ತಿ ಭೋಜನಾ

ಮೈಸೂರು,ಆ.3 : ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯ ಡಾ. ಪಾಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ರಾಜ್ಯಾದ್ಯಂತ ಕರೆ ನೀಡಿರುವ ‘ಮತ್ತೆ ಕಲ್ಯಾಣ ಅಭಿಯಾನ ಆ.1 ರಿಂದ 30ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಸಹಮತದ ವೇದಿಕೆ ವತಿಯಿಂದ ರಂಗಕರ್ಮಿ ಹೆಚ್.ಜನಾರ್ಧನ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ  ಮಾತನಾಡಿದ ಅವರು, ಅಭಿಯಾನದಂಗವಾಗಿ ನಗರದಲ್ಲಿ ಆ. 5 ಮತ್ತು 6ರಂದು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಅಂದು ಬೆಳಿಗ್ಗೆ 10.30ಕ್ಕೆ ಕಲಾಮಂದಿರದ ಸುಚಿತ್ರ ಗ್ಯಾಲರಿಯಲ್ಲಿ ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ರಚಿಸಿರುವ ವಚನ ಚಳುವಳಿಯ ಸಂದರ್ಭ ಚಿತ್ರಗಳು ಮತ್ತು ’ಮತ್ತೆ ಕಲ್ಯಾಣಕ್ಕೆ ಬಾ ಬಸವಣ್ಣ’ ಎಂಬ ಚಿತ್ರಗಳ ಪ್ರದರ್ಶನವಿದ್ದು ಡಾ ಅರವಿಂದ ಮಾಲಗತ್ತಿ ಚಾಲನೆ ನೀಡುವರು ಎಂದರು.

ಬೆಳಿಗ್ಗೆ 11 ರಿಂದ 1 ಗಂಟೆಯವರಿಗೆ ಕಿರುರಂಗ ಮಂದಿರದಲ್ಲಿ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳಿಂದ ವಚನ ಗಾಯನ, ವಚನ ವಾಚನ ಮತ್ತು ಚಿತ್ರರಚನಾ ಕಾರ್ಯಕ್ರಮಗಳು ನಡೆಯಲ್ಲಿದೆ. ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ನಡೆಯಲಿರುವ ವಚನ ಭಾರತ- ದೀಪ್ತಿ ಚಿತ್ರ ರಚನೆಯಲ್ಲಿ ವಿವಿಧ ಕಾಲೇಜಿನ ವಿಧ್ಯಾರ್ಥಿಗಳು ಮತ್ತು ಯುವ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸಂಜೆ 6.30ರಿಂದ 8ಗಂಟೆವರೆಗೆ ಹೆಸರಾಂತ ಕಲಾವಿದರಿಂದ ವಚನ ಗಾಯನ ನಡೆಯಲಿದೆ.

ನಂತರ ಸಂಚಾಲಕ ಶರಣ ಮಹದೇವಪ್ಪ ಮಾತನಾಡಿ, ಆ. 6ರಂದು ನಗರದ ಕಲಾಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಡಾ ಪಾಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿಗಳು ಸಂವಾದ ನಡೆಸಲಿದ್ದಾರೆ. ಈ ಸಂವಾದದಲ್ಲಿ ಚಿಂತಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮತ್ತು ಜನಾರ್ಧನ್ ಪಾಲ್ಗೊಳ್ಳಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಏರ್ಪಡಿಸಿರುವ ಸಾಮರಸ್ಯ ನಡಿಗೆಯು ಗನ್ ಹೌಸ್ ಬಳಿ ಬಸವ ಪುತ್ಥಳಿಯಿಂದ ಹೊರಟು ಕುವೆಂಪುರವರ ವಿಶ್ವಮಾನವ ಉದ್ಯಾನವನ ತಲುಪಿ ಹಾರ್ಡಂಗ್ ವೃತ್ತದ ಮೂಲಕ ಅರಮನೆ ಉತ್ತರ ಧ್ವಾರ ಸೇರಿ ಗಾಂಧಿಚೌಕ ತಲುಪಿ ಪುರಭವನದ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆಯ ಬಳಿ ಮುಕ್ತಾಯಗೊಳ್ಳಲಿದೆ ಎಂದರು.

ಸಂಜೆ  6 ಗಂಟೆಗೆ ಕಲಾಮಂದಿರದಲ್ಲಿ ಡಾ.ಪಂಡಿತಾರಧ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಾರ್ವಜನಿಕ ಸಮಾವೇಶವನ್ನು ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ವಹಿಸಲಿದ್ದಾರೆ. ಸಮಾವೇಶದಲ್ಲಿ  ಡಾ.ರಂಜಾನ್ ದರ್ಗಾ ಮತ್ತು ಡಾ.ಬಿ.ಟಿ. ಲಲಿತಾ ನಾಯಕ್ ಭಾಗವಹಿಸಲಿದ್ದಾರೆ. ರಾತ್ರಿ 7 ಗಂಟೆಗೆ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ‘ಮೊಳಿಗೆ ಮಾರಯ್ಯ ನಾಟಕ ಪ್ರದರ್ಶನವಿರಲಿದೆ.  ನಂತರ ಸಾಮರಸ್ಯ ಭೋಜನ ಏರ್ಪಡಿಸಲಾಗಿದ್ದು,  ಭೋಜನಕೂಟದಲ್ಲಿ ಎಲ್ಲಾ ಜಾತಿ, ಮತ, ಪಂಥಗಳ ನಾಗರಿಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಂಚಾಲಕರಾದ ಜವರಪ್ಪ, ಕೆ.ಆರ್.ಗೋಪಾಲಕೃಷ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ಇತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: