ಪ್ರಮುಖ ಸುದ್ದಿಮೈಸೂರು

ಜೆಡಿಎಸ್ ನಿಂದ ಮತ್ತೊಂದು ವಿಕೆಟ್ ಪತನ : ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಆ.5:-  2018ರ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಅಂದಿನ ಹಾಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದು, ಜೆಡಿಎಸ್ ನಿಂದ ಮತ್ತೊಂದು ವಿಕೆಟ್ ಪತನವಾದಂತಾಗಿದೆ.

ನಿನ್ನೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಜಿ.ಟಿ.ದೇವೇಗೌಡ ಅವರು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದು,  ಇದು ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ರಾಜಕೀಯಕ್ಕೆ ಗುಡ್ ಬೈ ಹೇಳಿದರು. ರಾಜಕೀಯದಲ್ಲಿ ಭಾರೀ ನೊಂದಿದ್ದೇನೆ. ನನಗೆ ರಾಜಕೀಯ ಸಾಕು. ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಮುಂದಿನ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿ ಬಂದಿದ್ದೇನೆ. ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ದೇವರೆಂದು ಭಾವಿಸಿ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಹೇಳಿದರು.

ಚುನಾವಣೆ ನೋವು ಏನು ಎನ್ನುವುದು ನನಗೆ ಮಾತ್ರ ಗೊತ್ತು. ಇನ್ನುಳಿದ ಮೂರೂವರೆ ವರ್ಷ ಕ್ಷೇತ್ರದ ಜನರ ಜತೆ ಇರುತ್ತೇನೆ. ನನ್ನ ಜನರಿಗೆ ಒಂದು ಥ್ಯಾಂಕ್ಸ್ ಹೇಳೋಕೆ ಆಗಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಯಾರ ಹಂಗಿನಲ್ಲೂ ಬದುಕಿಲ್ಲ. ನನಗೆ ಯಾವುದೇ ರಾಜಕೀಯ ಗುರುಗಳಿಲ್ಲ. ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಯಾರಿಂದಲೂ ಸಹಾಯವಾಗಿಲ್ಲ. ಚುನಾವಣೆಗಳಿಗಾಗಿ ಜೆಡಿಎಸ್‌ನಿಂದ ಒಂದು ರೂಪಾಯಿ ಹಣ ಪಡೆದಿಲ್ಲ. ನನ್ನ ಸ್ವಂತ ಹಣದಿಂದ ಎಲ್ಲವನ್ನೂ ಮಾಡಿದ್ದೇನೆ ಎಂದರು.

ನನಗೆ ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಬೇಡ ಎಂದು ಒಂದು ತಿಂಗಳು ದೂರ ಸರಿದಿದ್ದೆ. ನನಗಿಷ್ಟವಾದ ಖಾತೆ ಸಿಗಲಿಲ್ಲ. ಹೇಳುತ್ತಾ ಹೋದರೆ ಸಾಕಷ್ಟಿದೆ ಎಂದು ಜೆಡಿಎಸ್ ವಿರುದ್ಧ ಬೇಸರ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: