ಪ್ರಮುಖ ಸುದ್ದಿಮೈಸೂರು

ಸ್ಥಳೀಯ ಬಹುಭಾಷಿಗರ ಕಡೆಗಣನೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಒಕ್ಕೂಟ ವ್ಯವಸ್ಥೆಯಲ್ಲಿ ಸ್ಥಳೀಯ ಭಾಷಿಗರಿಗೆ ಆದ್ಯತೆ ಕಲ್ಪಿಸದಿರುವುದು ಅಸಾಂವಿಧಾನಿಕ ನಡೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಮಹಾಲೇಖಪಾಲರ ಕಚೇರಿಯ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗಿದ್ದ ಮಹಾಲೇಖಪಾಲರ ಕಚೇರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಸ್ಥಾಪಿತವಾಗಿರುವ ಕೇಂದ್ರ ಸ್ವಾಮ್ಯದ ಕಾರ್ಖಾನೆಗಳು, ಸಂಸ್ಥೆಗಳು, ಬ್ಯಾಂಕ್‍ಗಳು, ಸಾರ್ವಜನಿಕ ಉದ್ದಿಮೆಗಳು ಮತ್ತು ಖಾಸಗಿ ಕಾರ್ಖಾನೆಗಳ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಅನುಷ್ಠಾನ, ಸ್ಥಳೀಯರಿಗೆ ನೇಮಕಾತಿಯಲ್ಲಿ ಉದ್ಯೋಗ, ತ್ರಿಭಾಷಾ ಸೂತ್ರ ಅಳವಡಿಸಿರುವ ಕುರಿತು ಹೇಳಿದರು.

ಕೇಂದ್ರ  ಮತ್ತು ರಾಜ್ಯ ಸರ್ಕಾರದ ಸ್ಪಷ್ಟ ಆದೇಶಗಳಿದ್ದರೂ ಸಹ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳದಿರುವುದು ಮತ್ತು ದೈನಂದಿನ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ನಡೆಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ 15 ದಿನಗಳ ಒಳಗಾಗಿ ಸರ್ಕಾರದ ಆದೇಶಾನುಸಾರ ಕನ್ನಡ ಅನುಷ್ಠಾನದ ಕ್ರಮ ಕೈಗೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ಅಲ್ಲಿನ ಅಧಿಕಾರಿಗಳಗೆ ಸೂಚಿಸಿದರು. ಕನ್ನಡದಲ್ಲಿ ದೈನಂದಿನ ಪತ್ರವ್ಯವಹಾರ ಕಷ್ಟಸಾಧ್ಯ ಎಂದು ತಿಳಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು,  ‘ಕನ್ನಡ ಕಷ್ಟ ಅನ್ನುವ ಮನಸ್ಥಿತಿಬದಲಾಗಬೇಕು’ ಎಂದು ಹೇಳಿದ ಅವರು ಮಹಾಲೇಖಪಾಲರ ಕಚೇರಿಯಲ್ಲಿ ಸ್ಥಳೀಯ ಪ್ರಾದೇಶಿಕ ಭಾಷಿಗರನ್ನು ಡಾ.ಸರೋಜಿನಿ ಮಹಿಷಿ ವರದಿಯನ್ವಯ ಪಾಲಿಸದೇ ಇರುವುದು ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು ಕೂಡಲೇ ತ್ರಿಭಾಷಾ ನೀತಿಯನ್ನು ಅಳವಡಿಸಿಕೊಂಡು ರಾಜ್ಯಸರ್ಕಾರದ ಪ್ರಾಮುಖ್ಯತೆ ಮತ್ತು ಕನ್ನಡ ಭಾಷಾ ಸಾರ್ವಭೌಮತ್ವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು. ವಿಶೇಷವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ರೀತಿಯಲ್ಲಿ ಕಾಯ್ದೆಯನ್ನು ಜಾರಿಗೆ ತರುವಂತೆ ಕೇಂದ್ರಸರ್ಕಾರಕ್ಕೆ ಒತ್ತಾಯಪೂರ್ವಕ ಮನವಿ ಮಾಡುವಂತೆ ತಿಳಿಸಿದರು. ಜೊತೆಗೆ ಕೂಡಲೇ ಮಹಾಲೇಖಪಾಲರ ಕಚೇರಿಯಲ್ಲಿ ‘ಕನ್ನಡ ಕಲಿಕಾ ಕೇಂದ್ರ’ವನ್ನು ಸ್ಥಾಪಿಸಿ ಕನ್ನಡೇತರ ನೌಕರ / ಅಧಿಕಾರಿಗಳಿಗೆ ಕನ್ನಡವನ್ನು ಕಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸೂಚಿಸಿದರು.

ತದನಂತರ ಕೆನರಾಬ್ಯಾಂಕ್‍ಗೆ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕೆನರಾ ಬ್ಯಾಂಕ್ ಈ ನೆಲದಲ್ಲಿ ಜನ್ಮತಾಳಿ ರಾಷ್ಟ್ರವ್ಯಾಪಿ ಬೆಳೆದಿರುವುದು ಮತ್ತು ಕನ್ನಡ ಪರವಾಗಿನ ಬದ್ಧತೆಯನ್ನು ಹೊಂದಿರುವುದನ್ನು ಶ್ಲಾಘಿಸಿದರು. ನಾಮಫಲಕ, ಮೊಹರುಗಳು, ನಮೂನೆಗಳು, ಜಾಹಿರಾತುಗಳು ಇತ್ಯಾದಿಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಬಳಕೆಗೆ ತಂದಿರುವುದು ಮಾದರಿ ಎಂದು ತಿಳಿಸಿದರು. ದೈನಂದಿನ ಪತ್ರವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸುವಂತೆ ಸೂಚಿಸಿದರು. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‍ಗಳಲ್ಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ಭಾಷಿಗರನ್ನು ಕಡೆಗಣಿಸುತ್ತಿರುವುದು ಕಂಡುಬಂದಿದ್ದು ಕೆನರಾಬ್ಯಾಂಕ್‍ಗಳ ಲೀಡ್‍ಬ್ಯಾಂಕ್‍ಗಳ ಮೂಲಕ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ರಾಜ್ಯಭಾಷಾ ಸೂತ್ರದ ಅನ್ವಯ ಕಡ್ಡಾಯವಾಗಿ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಒತ್ತಾಯಪೂರ್ವಕ ಮನವಿ ಸಲ್ಲಿಸುವಂತೆ ಸೂಚಿಸಿದರು. ಕೆನರಾ ಬ್ಯಾಂಕ್‍ನಲ್ಲಿಯೂ ಪ್ರತ್ಯೇಕ ಕನ್ನಡ ಕಲಿಕಾ ಕೇಂದ್ರವನ್ನು ಸ್ಥಾಪಿಸುವಂತೆ ಮತ್ತು ಮೊಬೈಲ್ ತಂತ್ರಾಂಶಗಳನ್ನು ಕನ್ನಡದಲ್ಲಿಯೇ ಅಳವಡಿಸುವಂತೆ ಸೂಚಿಸಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಭೇಟಿ ನೀಡಿದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಜನಪ್ರಿಯಭಾಷೆಯನ್ನು ಆಡಳಿತ ವ್ಯವಸ್ಥೆಯಲ್ಲಿ ಬಳಸುವುದು ಎಲ್ಲಾ ಅಧಿಕಾರ ಮತ್ತು ಆಡಳಿತಶಾಹಿಯ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಬ್ಯಾಂಕ್‍ನಲ್ಲಿನ ನಮೂನೆಗಳಲ್ಲಿ ದೈನಂದಿನ ಪತ್ರಗಳಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸದೇ ಇರುವುದನ್ನು ತೀವ್ರವಾಗಿ ಪರಿಗಣಿಸಿದ ಅಧ್ಯಕ್ಷರು ಕೂಡಲೇ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶಗಳನ್ವಯ ಸಂಪೂರ್ಣವಾಗಿ ಸ್ಥಳೀಯ ಭಾಷೆಯಾದ ಕನ್ನಡದಲ್ಲಿಯೇ ವ್ಯವಹರಿಸಲು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ ಕನ್ನಡ ಬಲ್ಲವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿರುವುದನ್ನು ಅಭಿನಂದಿಸಿದ ಅಧ್ಯಕ್ಷರು ಉಳಿದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲು ಸೂಚಿಸಲಾಗುವುದೆಂದು ತಿಳಿಸಿದರು. ಕೆಲವೊಂದು ಎಟಿಎಂಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅಧ್ಯಕ್ಷರು ಕೂಡಲೇ ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. ಕನ್ನಡ ನಾಮಫಲಕಗಳ ಅಳವಡಿಕೆ, ನಮೂನೆಗಳನ್ನು ಕನ್ನಡದಲ್ಲಿ ಮುದ್ರಿಸುವುದು, ತಂತ್ರಾಂಶಗಳನ್ನು ಕನ್ನಡದಲ್ಲಿ ಅಳವಡಿಸಿಕೊಳ್ಳುವುದು ಹಾಗು ಗ್ರಾಹಕರ ಪಾಸ್‍ಬುಕ್ ಅನ್ನು ಕನ್ನಡದಲ್ಲಿ ನೀಡುವ ಬಗ್ಗೆ ಕೂಡಲೇ ಕ್ರಮವಹಿಸಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಇಲ್ಲವಾದಲ್ಲಿ ಶಿಸ್ತುಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ – ಕನ್ನಡ – ಕನ್ನಡಿಗರ ಮೂಲಕ ರಾಜ್ಯ ಪ್ರಗತಿಯನ್ನು ನಿರ್ಧರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನೇಕ ಸುತ್ತೋಲೆ ಆದೇಶಗಳನ್ನು ಹೊರಡಿಸಿದ್ದರೂ ಸಹ ಕೇಂದ್ರ ಸ್ವಾಮ್ಯದ ಕಚೇರಿಗಳು, ಬ್ಯಾಂಕ್‍ಗಳು, ಮಾಹಿತಿ ತಂತ್ರಜ್ಞಾನ, ಕಾರ್ಖಾನೆಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿಸದೇ ಇರುವುದನ್ನು ಮನಗಂಡಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಕಚೇರಿಗಳಿಗೆ ಭೇಟಿ ನೀಡಿ ಪ್ರಗತಿಪರಿಶೀಲನೆ ನಡೆಸಲಾಗುವುದು ಮತ್ತು ಅನುಷ್ಠಾನಗೊಳಿಸಲು ಹಿಂಜರಿಯುವ ಅಧಿಕಾರಿ / ನೌಕರರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಈಗಾಗಲೇ ಡಾ.ಸರೋಜಿನಿ ಮಹಿಷಿ ವರದಿಯ ಪುನರ್ ಪರಿಶೀಲನಾ ವರದಿಯ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ನೇಮಕಾತಿ ಪ್ರಕ್ರಿಯೆಯಲ್ಲಿ ವೃಂದ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ.100ರಷ್ಟು, ಬಿ ವೃಂದದವರಿಗೆ ಶೇ.80ರಷ್ಟು ಮತ್ತು ‘ಎ’ ವೃಂದದವರಿಗೆ ಶೇ.65ರಷ್ಟು ಮೀಸಲಾತಿ ಒದಗಿಸುವ ರೀತಿಯಲ್ಲಿ ಕಾಯ್ದೆ ರೂಪಿಸುವಂತೆ ನೇಮಕಾತಿ ಪ್ರಾಧಿಕಾರಗಳಿಗೆ ಸ್ಪಷ್ಟ ಆದೇಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಪೂರ್ವಕ ಮನವಿ ಮಾಡಲಾಗುವುದೆಂದು ತಿಳಿಸಿದರು.

ಪ್ರಗತಿಪರಿಶೀಲನಾ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ,  ಸದಸ್ಯರಾದ  ಪ್ರಕಾಶ್ ಜೈನ್,   ಗಿರೀಶ್ ಪಟೇಲ್,  ತಹಶೀಲ್ದಾರ್ ಪ್ರಶಾಂತ್,   ಉಪಕಾರ್ಮಿಕ ಆಯುಕ್ತ ರವಿಕುಮಾರ್,  ನರಸಿಂಹಮೂರ್ತಿ,   ಬಿ.ಎಂ.ಕೃಷ್ಣೇಗೌಡ,  ರಿಚರ್ಡ್ ಲೂಯೀಸ್,   ನಾ.ಶ್ರೀಧರ್,  ರಾ.ನಂ.ಚಂದ್ರಶೇಖರ,   ರವೀಂದ್ರ  ಭಾಗವಹಿಸಿದ್ದರು.

Leave a Reply

comments

Related Articles

error: