ಪ್ರಮುಖ ಸುದ್ದಿಮೈಸೂರು

ಪಕ್ಷಕ್ಕೆ ಮೋಸ ಮಾಡಿ ಹೋಗಿಲ್ಲ ಅಂತ ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡ್ತೀರಾ? : ಹೆಚ್.ವಿಶ್ವನಾಥ್ ಗೆ ಮಾಜಿ ಸಚಿವ ಸಾ.ರಾ.ಮಹೇಶ್ ಪಂಥಾಹ್ವಾನ

ನಿಲ್ಲದ ಹೆಚ್.ವಿಶ್ವನಾಥ್ ,ಮಾಜಿ ಸಚಿವ ಸಾ.ರಾ.ಮಹೇಶ್ ವಾಕ್ಸಮರ

ಮೈಸೂರು,ಆ.5:-  ಹೆಚ್.ವಿಶ್ವನಾಥ್  ಕಾರ್ಕೋಟಕ ವಿಷ ಎಂದು ಗೊತ್ತಿರಲಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ವಿಶ್ವನಾಥ್ ವಿರುದ್ಧ ಗುಡುಗಿದ್ದಾರೆ.

ಅವರಿಂದು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ನಾನೇ ಎನ್ನುವ ಮೂಲಕ ವಿಶ್ವನಾಥ್ ಆರೋಪವನ್ನು ಸಮರ್ಥಿಸಿಕೊಂಡರು. ಆದರೆ ಕಾರ್ಕೋಟಕ ವಿಷ ಮಾತ್ರ ವಿಶ್ವನಾಥ್. ಮೂಲೆ ಗುಂಪಾದ ಅವರನ್ನು ಪಕ್ಷಕ್ಕೆ ಕರೆತಂದೆ. ಇದರಿಂದ ಹಿರಿಯ ರಾಜಕಾರಣಿಗೆ ಉತ್ತಮ ನೆಲೆ ಕಲ್ಪಿಸೋ ಉದ್ದೇಶ ಇತ್ತು. ಆದರೆ ವಿಶ್ವನಾಥ್ ಈ ರೀತಿಯ ಕಾರ್ಕೋಟಕ ವಿಷ ಎಂದು ಗೊತ್ತಿರಲಿಲ್ಲ ಎಂದು ಗುಡುಗಿದರು.

ಎಲ್ಲೇ ಕರೆದರೂ ನಾನು ಚರ್ಚೆಗೆ ಸಿದ್ಧ ಎನ್ನುವ ಮೂಲಕ ವಿಶ್ವನಾಥ್ ಪಂಥಾಹ್ವಾನಕ್ಕೆ ಒಪ್ಪಿಗೆ ಸೂಚಿಸಿದ ಸಾ.ರಾ ಮಹೇಶ್ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಬೇಕಾದ್ರು ಬರ್ತೀನಿ. ಬಹಿರಂಗ ಚರ್ಚೆಗೆ ಬೇಕಾದ್ರು ನಾನು ಸಿದ್ಧನಿದ್ದೇನೆ. ನಿನ್ನೆ ನಾನು ಅವರು ಚರ್ಚೆಗೆ ಆಹ್ವಾನ ಮಾಡ್ತಾರೆಂದು ಕಾಯುತ್ತಿದ್ದೆ. ಆದರೆ ಅವರು ಪಂಥಾಹ್ವಾನ ನೀಡಿದ್ದಾರೆ. ನಾನು ಬದ್ಧ. ಅವರು ಎಲ್ಲಿಯಾದರು ಕರೆಯಲಿ ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.

ದೇವೇಗೌಡರ ಮನೆಯಲ್ಲಿ ಕುಳಿತು ನೀವೇನೇಳಿದ್ರಿ? ಸಿದ್ದರಾಮಯ್ಯರಿಂದ ಸಾಕಷ್ಟು ನೊಂದಿದ್ದೇನೆ. ನನಗೆ ಯಾವುದೇ ಅಧಿಕಾರ ಬೇಡ, ಸಚಿವ ಸ್ಥಾನ ಬೇಡ. ನನ್ನ ಕೊನೆಗಾಲದಲ್ಲಿ ಕೇವಲ ನನಗೆ ಶಾಸಕನನ್ನು ಮಾಡಿ ಸಾಕು ಎಂದಿದ್ರಿ. ಅದೆಲ್ಲವು ಮರೆತು ಹೋಯಿತೇ ವಿಶ್ವನಾಥ್ ಅವರೇ ಎಂದು ಕಿಡಿಕಾರಿದರು.

ನಾನು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಪಕ್ಷಕ್ಕೆ ಮೋಸ ಮಾಡಿ ಹೋಗಿಲ್ಲ ಅಂತ ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡ್ತೀರಾ? ನಿಮಗೆ ಆ ಧೈರ್ಯ ಇದ್ದರೆ ಬನ್ನಿ ಪ್ರಮಾಣ ಮಾಡಿ ಹೇಳಿ ಎಂದು ವಿಶ್ವನಾಥ್ ಅವರಿಗೆ ಪ್ರಮಾಣ ಮಾಡುವಂತೆ ಆಹ್ವಾನ ನೀಡಿದರು. ನೀನು ರಾಜಕೀಯ ವ್ಯಭಿಚಾರಿ ಎಂದು ವಿಶ್ವನಾಥ್ ಅವರಿಗೆ ಏಕವಚನದಲ್ಲೇ ಜರಿದ ಸಾ.ರಾ ಮಹೇಶ್ ಪಕ್ಷ ದ್ರೋಹ ಮಾಡಿ ಬಾಂಬೆಗೆ ಹೋಗಿ ಕುಳಿತಿದ್ದು ಸುಳ್ಳಾ? ಯಾವುದೇ ಹಣ ಪಡೆಯದೆ ಹೋಗಿದ್ರಾ? ಬನ್ನಿ ನೀವು ಎಲ್ಲೇ ಹೇಳಿದರೂ ಅಲ್ಲಿಗೆ ನಾನು ಬರಲು ಸಿದ್ಧ. ನಿಮ್ಮದೇ ಜಾಗ, ನಿಮ್ಮದೇ ಆಯ್ಕೆ ಎಂದು ವಿಶ್ವನಾಥ್ ಅವರ ಆಹ್ವಾನ ಒಪ್ಪಿಕೊಂಡು ಪ್ರತಿ ಸವಾಲು ಹಾಕಿದರು.   ದೇವೇಗೌಡರ ಕುಟುಂಬಕ್ಕೆ ವಿಷವುಣಿಸಿದವರು ಅನೇಕರಿದ್ದಾರೆ. ಜನರಿಗೆ ನಿಮ್ಮ ಗೋಮುಖ ವ್ಯಾಘ್ರದ ಮುಖ ಗೊತ್ತಾಗಬೇಕಿದೆ. ಬನ್ನಿ ಪ್ರಮಾಣ ಮಾಡಿ, ಸುಳ್ಳಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆದರೆ ಸುಳ್ಳು ಆಣೆ ಮಾಡಿದ್ರೆ ದೇವರು ನೋಡಿಕೊಳ್ತಾನೆ ಎಂದರು ವಿಶ್ವನಾಥ್ ಅವರೇ ದಿನಾಂಕ, ಸಮಯ ನಿಗದಿ ಮಾಡಲಿ. ನಾನು ಅಲ್ಲಿಗೆ ಬಂದು ಪ್ರಮಾಣ ಮಾಡುತ್ತೇನೆ. ಅಥವಾ ಚರ್ಚೆಗೆ ಜಾಗ, ಸಮಯ ನಿಗದಿ ಮಾಡಿದ್ರು ಓಕೆ ಎಂದು ತಿಳಿಸಿದರು.

ನನ್ನ ರಾಜಕೀಯ ಜೀವನದಲ್ಲಿ ಯಾರನ್ನೂ ವೈಯುಕ್ತಿಕವಾಗಿ ನಿಂದನೆ ಮಾಡಿಲ್ಲ. ಯಾರನ್ನು ನನ್ನ ಕ್ಷೇತ್ರದ ಜನತೆ ನನ್ನ ವಿರುದ್ಧವೇ ಸುಮಾರು 28 ಸಾವಿರ ಮತಗಳಿಂದ ದೂರ ಮಾಡಿದ್ರು. ಅಂಥಹವರನ್ನು ನಾನು ಎಲ್ಲರ ವಿರೋಧದ ನಡುವೆ ಪಕ್ಷಕ್ಕೆ ಕರತಂದೆ. ವಿಶ್ವನಾಥ್ ಹೇಳಿರುವ ಎಲ್ಲಾ ಹೇಳಿಕೆಗೆ ನಾನು ಬದ್ಧ. ದೇವಸ್ಥಾನಕ್ಕೆ, ಸುದ್ದಿಗೋಷ್ಠಿಗೆ, ಮಾನನಷ್ಟ ಮೊಕದ್ದಮೆಗೆ ನಾನು ಸಿದ್ಧ. ಈ ಹಳ್ಳಿ ಹಕ್ಕಿಗಳೇ ಹೀಗೆ. ಒಂದೊಂದು ಕಾಲಕ್ಕೆ ಒಂದೊಂದು ಗೂಡಿಗೆ ಹೋಗಿ ಸೇರುತ್ತವೆ ಎಂದು ಕುಟುಕಿದರು.

ಸುದ್ದಿಗೋಷ್ಠಿಯಲ್ಲಿ ಸಾ.ರಾ.ಅಭಿಮಾನಿಗಳು, ಜೆಡಿಎಸ್ ನ ಕೆಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: