ಮೈಸೂರು

ಕಾನೂನು ಕಾಲೇಜುಗಳ ‘ರಾಷ್ಟ್ರೀಯ ಅಣುಕು ನ್ಯಾಯಾಲಯ’ ಫೆ.17ರಿಂದ

ಮೈಸೂರಿನ ಜೆ.ಎಸ್.ಎಸ್. ಕಾನೂನು ಕಾಲೇಜು ಹಾಗೂ ಚೆನ್ಹೈನ ಸುರಾನಾ ಮತ್ತು ಸುರಾನ ಅಂತರರಾಷ್ಟ್ರೀಯ ಕಾನೂನು ಸಂಸ್ಥೆಯ ಸಹಯೋಗದಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ‘ರಾಷ್ಟ್ರೀಯ ಅಣುಕು ನ್ಯಾಯಾಲಯ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಪರ್ಧೆಯನ್ನು ಫೆ.17ರಿಂದ 19ರವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದು ಉದ್ಘಾಟನೆಯನ್ನು ಫೆ.17ರ ಸಂಜೆ 6ಕ್ಕೆ ರಾಜ್ಯ ಉಚ್ಛನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಅಜಿತ್ ಜೆ.ಗುಂಜಾಲ್ ನೆರವೇರಿಸುವರು. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್ ಅಧ್ಯಕ್ಷತೆ ವಹಿಸುವರು.ಸುರಾನ ಮುಖ್ಯ ಕಾರ್ಯನಿರ್ವಾಹಕ ವಿನೋದ್, ಶೈಕ್ಷಣಿಕ ಮುಖ್ಯಸ್ಥ ರವಿಚಂದ್ರನ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ರಾಮಮೂರ್ತಿ ಸಮಾರಂಭದಲ್ಲಿ ಭಾಗವಹಿಸುವರು.

ದೇಶದ ಸುಮಾರು 30 ಪ್ರತಿಷ್ಠಿತ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ರಾಷ್ಟ್ರೀಯ ಏಕರೂಪ ತೆರಿಗೆ ‘ಸಿಎಸ್‍ಟಿ ಹಾಗೂ ಜಿಎಸ್‍ಟಿ’ ವಿಷಯಾಧಾರಿತವಾಗಿ ಸ್ಪರ್ಧೆ ನಡೆಯಲಿದೆ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಗೋವಾ ಸೇರಿದಂತೆ ಹಲವಾರು ರಾಜ್ಯಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು, ಫೆ.18ರಂದು ಪೂರ್ವಭಾವಿ ಸುತ್ತು,ಫೆ.19 ಸೆಮಿಫೈನಲ್ ಹಾಗೂ ಅಂತಿಮ ಹಂತದ ಸ್ಪರ್ಧೆಯು ಜರುಗಲಿದೆ. ಸಂಜೆ ನಡೆಯುವ ಸಮಾರೋಪದಲ್ಲಿ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಎನ್.ಕುಮಾರ್ ಸಮಾರೋಪ ಭಾಷಣ ಮಾಡುವರು, ನ್ಯಾಯವಾದಿ ಆದಿತ್ಯ ಸೋಂದಿ, ಬೆಂಗಳೂರಿನ ವರಮಾನ ತೆರಿಗೆ ಉಪ ಆಯುಕ್ತ ಕೆ.ಆರ್.ನಾರಾಯಣ, ಕಂಪನಿ ಕಾನೂನು ನ್ಯಾಯಾಧೀಕರಣದ ಸದಸ್ಯ ರತಕೊಂಡ ಮುರಳಿ ಇವರುಗಳು ಸ್ಪರ್ಧೆಯ ತೀರ್ಪುಗಾರರಾಗಿದ್ದಾರೆ, ಪ್ರಥಮ 30 ಸಾವಿರ ರೂ.ಹಾಗೂ ದ್ವೀತಿಯ 15 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಸುರಾನಾ ಮತ್ತು ಸುರಾನ ಅಂತರರಾಷ್ಟ್ರೀಯ ಕಾನೂನು ಸಂಸ್ಥೆ ಶೈಕ್ಷಣಿಕ ಮುಖ್ಯಸ್ಥ ರವಿಚಂದ್ರನ್, ಜೆ.ಎಸ್.ಎಸ್. ಕಾನೂನು ಕಾಲೇಜಿನ ಉಪನ್ಯಾಸಕ ನಾಗೇಂದ್ರ ಮೂರ್ತಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: