ಪ್ರಮುಖ ಸುದ್ದಿ

ಆ.10 : ಕಗ್ಗೋಡ್ಲುವಿನಲ್ಲಿ ರಾಜ್ಯ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾಕೂಟ

ರಾಜ್ಯ(ಮಡಿಕೇರಿ) ಆ.6 :- ರಾಜ್ಯ ಮಟ್ಟದ 28ನೇ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಯನ್ನು ಆ.10 ರಂದು ಕಗ್ಗೋಡ್ಲು ಗ್ರಾಮದ ದಿ. ಸಿ.ಡಿ. ಬೋಪಯ್ಯನವರ ಗದ್ದೆಯಲ್ಲಿ ಆಯೋಜಿಸಲಾಗಿದೆಯೆಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಕೆ.ಕೆ.ಸುಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿಯ ನೆಹರು ಯುವ ಕೇಂದ್ರ, ಯೂತ್ ಹಾಸ್ಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದೆಯೆಂದು ತಿಳಿಸಿದರು.
ಕ್ರೀಡಾಕೂಟವನ್ನು ಅಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ. ಹರೀಶ್ ಅವರು ಉದ್ಘಾಟಿಸಲಿದ್ದು, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪ್ರತಾಪ ಸಿಂಹ , ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಮಡಿಕೇರಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಸದಸ್ಯೆ ಕುಮುದ ರಶ್ಮಿ, ಮೇಕೇರಿ ಗ್ರಾಪಂ ಅಧ್ಯಕ್ಷೆ ಕೆ.ಕೆ.ಜಯಂತಿ, ಉಪಾಧ್ಯಕ್ಷ ಕೆ.ಎಸ್.ಭೀಮಯ್ಯ, ಯೂತ್ ಹಾಸ್ಟೆಲ್ ಅಸೋಸಿಯೇಷನ್‍ನ ಮಡಿಕೇರಿ ಘಟಕದ ಅಧ್ಯಕ್ಷ ಸಿ.ಬಿ. ದೇವಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಸಮಾರೋಪ ಸಮಾರಂಭ ಅಂದು ಸಂಜೆ 6 ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಹಾಕತ್ತೂರು ಗ್ರಾಪಂ ಅಧ್ಯಕ್ಷೆ ಶಾರದಾ ರಾಮಕೃಷ್ಣ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಹಾಕತ್ತೂರು ಪಂಚಾಯ್ತಿ ಉಪಾಧ್ಯಕ್ಷ ವಿಷ್ಣು ಕುಮಾರ್, ಸದಸ್ಯರಾದ ಪಿಯೂಷ್ ಪೆರೇರ, ಹೇಮಾವತಿ, ಬೆಂಗಳೂರಿನ ಉದ್ಯಮಿ ಪರಪಳ್ಳಿ ರವೀಂದ್ರ, ಮಡಿಕೇರಿಯ ಉದ್ಯಮಿ ಸತ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದ ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ ಅವರು, ಬೆಳಗ್ಗೆ 10.30ಕ್ಕೆ ಪ್ರಾರಂಭವಾಗುವ ಕ್ರೀಡಾ ಕೂಟದಲ್ಲಿ ಪುರುಷ ವಿಭಾಗಕ್ಕೆ ವಾಲಿಬಾಲ್, ಮಹಿಳೆಯರ ವಿಭಾಗಕ್ಕೆ ಥ್ರೋಬಾಲ್ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಸೇರಿದಂತೆ ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಮಧ್ಯಾಹ್ನ 1.30ರಿಂದ ಕೆಸರು ಗದ್ದೆ ಓಟದ ಸ್ಪರ್ದೆಗಳು ಪ್ರಾರಂಭವಾಗಲಿದ್ದು, ಕಿರಿಯ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 50ಮೀ ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 100 ಮೀ. ಓಟ, ಪ್ರೌಢ ಶಾಲಾ ಬಾಲಕ, ಬಾಲಕಿಯರಿಗೆ 200 ಮೀ. ಓಟ ಹಾಗೂ ಪದವಿ ಪೂರ್ವ ಕಾಲೇಜು ಬಾಲಕ, ಬಾಲಕಿಯರಿಗೆ 300 ಮೀ ಓಟದ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕ ಪುರುಷರು ಮತ್ತು ಮಹಿಳೆಯರಿಗೆ ಮುಕ್ತ ಓಟ ಹಾಗೂ ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಾಲಿಬಾಲ್, ಮತ್ತು ಹಗ್ಗ ಜಗ್ಗಾಟ (ಪುರುಷರ ವಿಭಾಗಕ್ಕೆ) ತಂಡಗಳಿಗೆ ಮೈದಾನ ಶುಲ್ಕ 1000 ರೂ. ಆಗಿದ್ದು, ಥ್ರೋಬಾಲ್ ಮತ್ತು ಮಹಿಳೆಯರ ಹಗ್ಗಜಗ್ಗಾಟ ತಂಡಗಳಿಗೆ ಮೈದಾನ ಶುಲ್ಕ 500 ರೂ. ಆಗಿದೆ. ಇದನ್ನು ಆಯಾ ತಂಡಗಳು ಆ.9ರ ಅಪರಾಹ್ನ 2 ಗಂಟೆಯ ಒಳಗಾಗಿ ಪಾವತಿಸುವಂತೆ ನವೀನ್ ದೇರಳ ತಿಳಿಸಿದರು.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಪಾರಿತೋಷಕ ಮತ್ತು ನಗದು ಬಹುಮಾನಗಳನ್ನು ನೀಡಲಾಗುವುದು. ಪ್ರೌಢಶಾಲಾ ವಿಭಾಗದ ಹಗ್ಗ ಜಗ್ಗಾಟದಲ್ಲಿ ಭಾಗವಹಿಸುವವರು ತಮ್ಮ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ತರಬೇಕೆಂದರು.
ಹೆಚ್ಚಿನ ಮಾಹಿತಿಗೆ 9740404520, 9481213920, 9480674546, 9449759029 ಸಂಪರ್ಕಿಸಬಹುದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಕಾರ್ಯದರ್ಶಿ ಬಾಳಡಿ ದಿಲೀಪ್ ಕುಮಾರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: