ಮೈಸೂರು

ಮಳೆಯ ನಡುವೆಯು ಮನಸಿಗೆ ಮುದ ನೀಡಿದ ಆರ್ಟಿಕ್ಯುಲೇಟ್ ನೃತ್ಯ ಪ್ರದರ್ಶನ

ಮೈಸೂರು, ಆ.6:- ನಗರದಲ್ಲಿ ಮನೆ ಮಾತಾಗಿರುವ ಆರ್ಟಿಕ್ಯುಲೇಟ್ ನೃತ್ಯೋತ್ಸವದ 38ನೇ ಸಂಚಿಕೆಯು ಇತ್ತೀಚೆಗೆ ಗಾನಭಾರತಿಯ ವೀಣೆಶೇಷಣ್ಣ ಭವನದಲ್ಲಿ ನಡೆಯಿತು. ಈ ನೃತ್ಯೋತ್ಸವಕ್ಕೆ ಐವರು ನರ್ತಕಿಯರ ನೃತ್ಯ ವೈಭವಕ್ಕೆ ಸಾಕ್ಷಿಯಾಯಿತು. ಇವರ ಪೈಕಿ ನಾಲ್ವರು ನರ್ತಕಿಯರು ಭರತನಾಟ್ಯ ಶೈಲಿಯಲ್ಲಿ ನರ್ತಿಸಿದರೆ, ಒಬ್ಬರು ಕಥಕ್ ಶೈಲಿಯಲ್ಲಿ ಪ್ರದರ್ಶನ ನೀಡಿದರು.

ಮೊದಲಿಗೆ ಭರತನಾಟ್ಯ ಕಲಾವಿದೆ  ಆಕಾಂಕ್ಷ ಗಿರೀಶ್ ವಜುವೂರ್ ಶೈಲಿಯಲ್ಲಿ ಪ್ರದರ್ಶನ ನೀಡಿದರು. ಪ್ರಸ್ತುತ ನೃತ್ಯ ನಿಕೇತನದ ಡಾ.ಜಾನಕಿ ರಂಗರಾಜನ್‍ರವರ ಬಳಿ ಹೆಚ್ಚಿನ ಅಭ್ಯಾಸ ಮಾಡುತ್ತಿರುವ ಇವರು ಮುತ್ತುಸ್ವಾಮಿ ದೀಕ್ಷಿತರ ‘ಅರ್ಧ ನಾರೀಶ್ವರಂ ಆರಾಧ್ಯಮಿ ಸತತಂ’ ಎಂಬ ಕೃತಿಯ ಮೂಲಕ ತಮ್ಮ ಪ್ರದರ್ಶನಕ್ಕೆ ಚಾಲನೆ ನೀಡಿದರು. ನಂತರ ಆದಿಶಂಕರ ವಿರಚಿತ ‘ಉಮಾ ಮಹೇಶ್ವರ ಸ್ತ್ರೋತ್ರಂ’ ಕೃತಿಗೆ ಹೆಜ್ಜೆ ಹಾಕಿದರು. ನಂತರ ಜಯದೇವ ಅಷ್ಠಪದಿ ‘ನಾಥ ಹರೇ ಜಗನ್ನಾಥ ಹರೇ’ ಹಾಡಿನ ಮೂಲಕ ತಮ್ಮ ಪ್ರದರ್ಶನವನ್ನು ಮುಕ್ತಾಯಗೊಳಿಸಿದರು.

ನಂತರ ಪ್ರದರ್ಶನ ನೀಡಿದ ಭರತನಾಟ್ಯ ಕಲಾವಿದೆ ಎನ್.ಶೋಭಾ  ಮಹಾವೈದ್ಯನಾಥರ ಕೃತಿ ‘ಪಾಹಿಮಾಂ ಶ್ರೀ ರಾಜರಾಜೇಶ್ವರಿ’ ಎಂಬ ಕೃತಿಯ ಮೂಲಕ ರಂಗ ಪ್ರವೇಶಿಸಿದರು. ಎರಡನೆಯದಾಗಿ ಹರಿದಾಸರ ದೇವರನಾಮ ‘ಮನೆಯೊಳಗಾಡೋ ಗೋವಿಂದ’ ಎಂಬ ಕೃತಿಗೆ ತಮ್ಮ ಭಾವಪೂರ್ವಕ ಅಭಿನಯ ನೀಡಿದರು. ಶ್ರೀ ಅಣ್ಣಮ್ಮಾಚಾರ್ಯರ ‘ಶ್ರೀಮನ್ನಾರಾಯಣ’ ಕೃತಿಗೆ ನೃತ್ಯ ಪ್ರದರ್ಶನ ನೀಡುವುದರೊಂದಿಗೆ ತಮ್ಮ ನೃತ್ಯಾಭಿನಯಕ್ಕೆ ತೆರೆ ಎಳೆದರು.

ಭರತನಾಟ್ಯ ಕಲಾವಿದೆ (ಕಲಾಕ್ಷೇತ್ರ ಶೈಲಿ) ಎಸ್.ವೈದೇಗಿಯವರು ‘ಆನಂದ ತಾಂಡವಂ’ ಎಂಬ ಕೃತಿಗೆ ಪ್ರದರ್ಶನ ನೀಡಿದರು. ನಂತರ ರೇವತಿ ರಾಗ ಮತ್ತು ಆದಿತಾಳದಲ್ಲಿ ಸಂಯೋಜನೆಗೊಂಡ ‘ತಿಲ್ಲಾನ’ ಪ್ರದರ್ಶಿಸಿದರು. ಬಳಿಕ   ರಾಧಾ ಶ್ರೀಧರ್‍  ಶಿಷ್ಯೆಯಾದ ಹಾಗೂ ಬೆಂಗಳೂರಿನ ವೆಂಕಟೇಶ ನಾಟ್ಯಮಂದಿರದ ವಿದ್ಯಾರ್ಥಿನಿ ಬಿಯಾಂಕ ರಾಧಾಕೃಷ್ಣ  ಭರತನಾಟ್ಯ ಏಕವ್ಯಕ್ತಿ ಮಾದರಿಯಲ್ಲಿ ಪ್ರದರ್ಶಿಸಿದರು.

ಮೈಸೂರು ಬಿ.ನಾಗರಾಜ್‍ ಅವರ ಶಿಷ್ಯೆ ಅಕ್ಷತಾ ಅಮೀನ್‍  ‘ಚಾಂದ್ ಕವಿತ್’ ಪ್ರದರ್ಶನ ನೀಡಿದರು. ಈ ಮೂಲಕ ಕಥಕ್ ಶೈಲಿಯ ನೃತ್ಯದ ರೂಪವನ್ನು ಅನಾವರಣಗೊಳಿಸಿದರು. ಹಾಗೆಯೇ ‘ನಿನ್ನಗಲೈ ಪೋಗಲಾರೆನು’ ಎಂಬ ಹರಿದಾಸ ಶ್ರೀ ವಿಠಲರ ಕೃತಿಗೆ ನರ್ತಿಸಿದರು. ಪುರಂದರದಾಸರ ಉಗಾಭೋಗಕ್ಕೂ ಕೂಡ ನೃತ್ಯಾಭಿನಯ ನೀಡಿ ಯಶಸ್ವಿಯಾದರು. ಎರಡೂ ಕೃತಿಗಳು ಶ್ರೀ ಕೃಷ್ಣ ಪರಮಾತ್ಮನ ಮೇಲೆ ರಚಿತಗೊಂಡಿವೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: